ಮೈಸೂರು: ರಸ್ತೆ ವಿಭಜಕಗಳ ಜಾಗದಲ್ಲಿ ಸುಂದರವಾದ ಹೂವಿನ ಗಿಡಗಳನ್ನ ಅಳವಡಿಸಿ ರಸ್ತೆ ಅಂದ ಹೆಚ್ಚಿಸಬೇಕಾದ ಸ್ಥಳದಲ್ಲಿ ಲಾಕಿಂಗ್ ಟೈಲ್ಸ್ ಗಳನ್ನ ಅಳವಡಿಸಿ ಹೂಟಗಳ್ಳಿ ನಗರಸಭೆ ಅಧಿಕಾರಿಗಳು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಹೂಟಗಳ್ಳಿಯಿಂದ ಕೆ.ಆರ್.ಎಸ್ ಗೆ ಸಾಗುವ ಮುಖ್ಯರಸ್ತೆಯ ರೋಡ್ ಡಿವೈಡರ್ ಗಳಿಗೆ ಲಾಕಿಂಗ್ ಟೈಲ್ಸ್ ಅಳವಡಿಸಲಾಗಿದೆ. ಒಂದು ವಿದ್ಯುತ್ ಕಂಬದಿಂದ ಮತ್ತೊಂದು ವಿದ್ಯುತ್ ಕಂಬದ ಅಂತರದಲ್ಲಿ ಲಾಕಿಂಗ್ ಟೈಲ್ಸ್ ಗಳನ್ನ ಅಳವಡಿಸಲಾಗಿದೆ. ಕಿಲೋಮೀಟರ್ ಗಟ್ಟಲೆ ಟೈಲ್ಸ್ ಅಳವಡಿಸುವ ಅಧಿಕಾರಿಗಳ ಮರ್ಮ ಏನು ಗೊತ್ತಿಲ್ಲ.

ರಸ್ತೆ ವಿಭಜಕಗಳಲ್ಲಿ ಹೂವಿನ ಗಿಡಗಳನ್ನ ಹಾಕುವುದು ಇದುವರೆಗೆ ನಡೆದು ಬಂದಿರುವ ಪದ್ದತಿ. ಅನಗತ್ಯವಾಗಿ ಇಲ್ಲಿ ಲಾಕಿಂಗ್ ಟೈಲ್ಸ್ ಅಳವಡಿಸಿರುವ ಉದ್ದೇಶವೇನು. ಸಹಜವಾಗಿ ಫುಟ್ ಪಾತ್ ಗಳಿಗೆ ಲಾಕಿಂಗ್ ಟೈಲ್ಸ್ ಅಳವಡಿಸಿ ಪಾದಚಾರಿಗಳಿಗೆ ಅನುಕೂಲ ಮಾಡಿಕೊಡಲಾಗುತ್ತದೆ. ಆದ್ರೆ ಈ ವಿಭಜಕದಲ್ಲಿ ಯಾರು ಓಡಾಡುತ್ತಾರೆ…?ಸಾರ್ವಜನಿಕರು ಬಳಸುವ ಸ್ಥಳದಲ್ಲಿ ಲಾಕಿಂಗ್ ಟೈಲ್ಸ್ ಅಳವಡಿಸಬೇಕಿರುತ್ತದೆ.

ಈ ವಿಭಜಕಗಳಿಗೆ ಅಳವಡಿಸುವ ಅಗತ್ಯವಿಲ್ಲ. ಸಾರ್ವಜನಜಕರ ತೆರಿಗೆ ಹಣ ಈ ರೀತಿಯಲ್ಲೂ ದುರುಪಯೋಗಪಡಿಸಬಹುದೆಂದು ಹೂಟಗಳ್ಳಿ ನಗರಸಭೆ ಅಧಿಕಾರಿಗಳು ತೋರಿಸಿ ಕೊಟ್ಟಿದ್ದಾರೆ. ಇಂತಹ ಅವೈಜ್ಞಾನಿಕ ನಿರ್ಧಾರಗಳನ್ನ ಕೈಬಿಡಬೇಕಿದೆ. ಸಾರ್ವಜನಿಕರ ತೆರಿಗೆ ಹಣ ಪೋಲಾಗುವುದನ್ನ ತಡೆ ಹಿಡಿಯಬೇಕಾಗುತ್ತದೆ. ಇಲ್ಲದಿದ್ದಲ್ಲಿ ಸಾರ್ವಜನಿಕರ ಆಕ್ರೋಷಕ್ಕೆ ಅಧಿಕಾರಿಗಳು ಉತ್ತರ ನೀಡಬೇಕಾಗುತ್ತದೆ.