ನಂಜನಗೂಡು: ಆ. 15 ರಂದು ನಡೆದ 80ನೇ ಸ್ವಾತಂತ್ರ್ಯ ದಿನಾಚರಣೆಯ ಸಾಂಸ್ಕೃತಿಕ ನೃತ್ಯ ಸ್ಪರ್ಧೆಯಲ್ಲಿ ತೀರ್ಪುಗಾರರ ಆಯ್ಕೆಯಲ್ಲಿ ಲೋಪವಾಗಿದೆ ಎಂದು ಆರೋಪಿಸಿ ನಂಜನಗೂಡು ತಾಲ್ಲೂಕು ಕಲಾವಿದರ ಒಕ್ಕೂಟವು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ನಂಜನಗೂಡು ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ಬುಧವಾರ ಮನವಿ ಸಲ್ಲಿಸಿದ ಕಲಾವಿದರ ಒಕ್ಕೂಟದ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದರು. ಕಲಾವಿದರ ಒಕ್ಕೂಟದ ಅಧ್ಯಕ್ಷ ಎನ್.ಹರ್ಷಿತ್ ಕುಮಾರ್ ಮಾತನಾಡಿ, ಸ್ವಾತಂತ್ರ್ಯ ದಿನಾಚರಣೆಯಲ್ಲಿ ನಡೆದ ಸಾಂಸ್ಕೃತಿಕ ನೃತ್ಯ ಸ್ಪರ್ಧೆಗೆ ತೀರ್ಪುಗಾರರಾಗಿ ನೃತ್ಯದ ಬಗ್ಗೆ ಯಾವುದೇ ಅನುಭವವಿಲ್ಲದ ಅಧಿಕಾರಿಗಳನ್ನು ನೇಮಿಸಲಾಗಿದೆ.
ಇದರಿಂದ ನಿಜವಾದ ನೃತ್ಯ ಕಲಾವಿದ ಮಕ್ಕಳಿಗೆ ಅನ್ಯಾಯವಾಗಿದೆ. ಪ್ರತಿಭಾವಂತ ಮಕ್ಕಳಿಗೆ ಸಿಗಬೇಕಾದ ಬಹುಮಾನವನ್ನು ನೀಡದೆ ವಂಚಿಸಲಾಗಿದೆ. ನೃತ್ಯ ಸ್ಪರ್ಧೆಯಲ್ಲಿ ನೃತ್ಯ ಬಗ್ಗೆ ತಿಳಿಯದ ಅಧಿಕಾರಿಗಳನ್ನು ತೀರ್ಪುಗಾರರನ್ನಾಗಿ ನೇಮಕ ಮಾಡಿರುವುದು ಖಂಡನೀಯ. ಒಬ್ಬ ಅಧಿಕಾರಿಗೆ ನೃತ್ಯ ಬಗ್ಗೆ ಏನು ತಿಳಿದಿದೆ ಎಂದು ನೇಮಕ ಮಾಡಿಕೊಂಡಿದ್ದರು. ಇದರಿಂದ ಸಾವಿರಾರು ಮಕ್ಕಳ ಕನಸು ನುಚ್ಚುನೂರಾಗಿದೆ. ಹಗಲು ರಾತ್ರಿ ಎನ್ನದೆ ಮಕ್ಕಳು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸಲು ತರಬೇತಿ ಪಡೆದುಕೊಳ್ಳುತ್ತಾರೆ.
ಆದರೆ, ಚೆನ್ನಾಗಿ ನೃತ್ಯ ಮಾಡುವ ಮಕ್ಕಳನ್ನು ಗುರುತಿಸುತ್ತಿಲ್ಲ ಅವರ ಪ್ರತಿಭೆಯನ್ನು ತಳಮಟ್ಟದಿಂದಲೇ ತುಳಿಯುತ್ತಿರುವುದಕ್ಕೆ ಸ್ಪಷ್ಟ ಉದಾರಣೆಯಾಗಿದೆ. ಕ್ರೀಡೆ ಮತ್ತು ವಿವಿಧ ಸ್ಪರ್ಧೆಗಳನ್ನು ನಡೆಸುವಾಗ ಆಯಾ ಸ್ಪರ್ಧೆಗಳಿಗೆ ಅನುಗುಣವಾಗಿ ತೀರ್ಪುಗಾರರನ್ನು ನೇಮಿಸುತ್ತಾರೆ. ಆದರೆ, ಈ ವಿಚಾರದಲ್ಲಿ ಯಾಕೆ ನೇಮಿಸಿಲ್ಲ. ತಾಲ್ಲೂಕು ಆಡಳಿತದ ಈ ನಡೆಯಿಂದ ಕಲಾವಿದರಿಗೆ ಅಪಮಾನ ಮಾಡಲಾಗಿದೆ. ಮುಂಬರುವ ಸ್ಪರ್ಧೆಗಳಲ್ಲಿ ನೃತ್ಯ ಕಲಾವಿದರಿಗೆ ಅವಕಾಶ ಮಾಡಿ ತೀರ್ಪುಗಾರರನ್ನಾಗಿ ನೇಮಕ ಮಾಡಬೇಕು. ಈ ಬಗ್ಗೆ ಬಹಿರಂಗವಾಗಿ ಕ್ಷಮೆ ಕೇಳಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನಂತರ ಕಲಾವಿದರ ಒಕ್ಕೂಟದ ಉಪಾಧ್ಯಕ್ಷ ರವಿ ಮಾತನಾಡಿ, ಸಾಂಸ್ಕೃತಿಕ ಕಾರ್ಯಕ್ರಮದ ವಿಚಾರದಲ್ಲಿ ಪ್ರತಿಭಾವಂತ ಮಕ್ಕಳಿಗೆ ಈ ನಿರ್ಧಾರದಿಂದ ಸಾಕಷ್ಟು ಅನ್ಯಾಯವಾಗಿದೆ. ಅನುಭವವಿಲ್ಲದವರನ್ನು ತೀರ್ಪುಗಾರರನ್ನಾಗಿ ಮಾಡಿದ ಪರಿಣಾಮ ಅರ್ಹ ಕಲಾವಿದರು ಗುರುತಿಸಲ್ಪಡದೆ ಹೋಗಿದ್ದಾರೆ. ಇದು ಕಲೆಗೆ ಮಾಡಿದ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಂಜನಗೂಡು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕಲಾವಿದರ ಒಕ್ಕೂಟದ ಉಪಾಧ್ಯಕ್ಷ ರವಿ, ಕಾರ್ಯದರ್ಶಿ ಭರತ್, ನವೀನ್, ಅಂದಾನಿ, ನಿರ್ದೇಶಕರಾದ ನವೀನ್, ಚೇತನ್, ವಿಷಕಂಠ ಸೇರಿದಂತೆ ಹಲವರು ಹಾಜರಿದ್ದರು.

