ಮೈಸೂರು: ಕಬಿನಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಬಿನಿ ಜಲಾಶಯವು ಪ್ರಸ್ತುತ ಭರ್ತಿಯಾಗುವ ಹಂತದಲ್ಲಿದೆ. ಈ ಹಿನ್ನೆಲೆಯಲ್ಲಿ ಕಾವೇರಿ ನೀರಾವರಿ ನಿಗಮ ನಿಯಮಿತ, ಕಬಿನಿ ಜಲಾಶಯ ವಿಭಾಗವು ಪ್ರವಾಹ ಮುನ್ನೆಚ್ಚರಿಕೆ ಸೂಚನೆಯನ್ನು ಹೊರಡಿಸಿದೆ.
ದಿನಾಂಕ 01-08-2026 ರಂದು ಪ್ರಸ್ತುತ ಕಬಿನಿ ಜಲಾಶಯಕ್ಕೆ 15,500 ಕ್ಯೂಸೆಕ್ ಒಳಹರಿವು ಬರುತ್ತಿದ್ದು, ಜಲಾಶಯದಿಂದ 8,000 ರಿಂದ 10,000 ಕ್ಯೂಸೆಕ್ ನೀರನ್ನು ಹೊರಬಿಡುವ ಸಂಭವವಿದೆ. ಈ ಪ್ರಮಾಣವು ಯಾವುದೇ ಕ್ಷಣದಲ್ಲಾದರೂ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಕಾರ್ಯಪಾಲಕ ಅಭಿಯಂತರರು, ಕಬಿನಿ ನದಿಯ ಪಾತ್ರದಲ್ಲಿರುವ ಮತ್ತು ನದಿಯ ಎರಡೂ ದಂಡೆಯಲ್ಲಿ ವಾಸಿಸುತ್ತಿರುವ ಜನರು ತಮ್ಮ ಆಸ್ತಿ-ಪಾಸ್ತಿ ಹಾಗೂ ಜಾನುವಾರು ರಕ್ಷಣೆಯ ಬಗ್ಗೆ ಮುನ್ನೆಚ್ಚರಿಕೆ ವಹಿಸಿ, ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಕೋರಿದ್ದಾರೆ.
ಜಲಾಶಯದಿಂದ ನೀರು ಬಿಡುಗಡೆಯಾಗುವುದರಿಂದ ನದಿಯ ನೀರಿನ ಮಟ್ಟವು ಏರುವ ಸಾಧ್ಯತೆಯಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಅಪಾಯವಿದೆ. ಆದ್ದರಿಂದ ಸಾರ್ವಜನಿಕರು ಆತಂಕಕ್ಕೆ ಒಳಗಾಗದೆ ಎಚ್ಚರಿಕೆಯಿಂದ ಇರುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
ಮಳೆಯಿಂದಾಗಿ ಕಬಿನಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದ್ದು, ಜಲಾಶಯ ಭರ್ತಿಯಾಗುವ ಹಂತದಲ್ಲಿದೆ. ನೀರಿನ ಮಟ್ಟವನ್ನು ನಿಯಂತ್ರಿಸುವ ಸಲುವಾಗಿ ಹೊರ ಹರಿವನ್ನು ಹೆಚ್ಚಿಸುವ ಸಾಧ್ಯತೆಯಿದೆ.

