ನಂಜನಗೂಡು: ವಜಾ ಮಾಡಿರುವ ಅಡುಗೆ ನೌಕರರನ್ನು ನಿಯೋಜಿಸುವಂತೆ ಆಗ್ರಹಿಸಿ ನಂಜನಗೂಡಿನಲ್ಲಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ವತಿಯಿಂದ ಅನಿರ್ದಿಷ್ಟಾವಧಿ ಪ್ರತಿಭಟನೆಯನ್ನು ನಡೆಸಲಾಗುತ್ತಿದೆ.
ನಂಜನಗೂಡು ನಗರದ ತಾಲ್ಲೂಕು ಪಂಚಾಯಿತಿ ಕಛೇರಿಯ ಮುಂಭಾಗದಲ್ಲಿ ಜಮಾಯಿಸಿದ ಅಕ್ಷರ ದಾಸೋಹದ ನೌಕರರು ಮತ್ತು ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಕ್ಷರ ದಾಸೋಹದ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಕೆ. ಮಂಜುಳಾ ಮಾತನಾಡಿ, ಕಂದೇಗಾಲ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 22 ವರ್ಷಗಳಿಂದ ಮುಖ್ಯ ಅಡುಗೆ ನೌಕರರಾಗಿ ಕೆಲಸ ಮಾಡುತ್ತಿದ್ದ ನಾಗಮ್ಮ ಎಂಬವರನ್ನು ಗ್ರಾ.ಪಂ ಸದಸ್ಯ ಕೃಷ್ಣಮೂರ್ತಿ, ಶಾಲಾ ಮುಖ್ಯ ಶಿಕ್ಷಕಿ ರಾಣಿ ಎಂಬುವರು ಏಕಾಏಕಿ ಕೆಲಸದಿಂದ ತೆಗೆದು ಹಾಕಿದ್ದಾರೆ. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಪ್ರಧಾನ ಮಂತ್ರಿ ಪೋಷನ್ ಶಕ್ತಿ ಯೋಜನೆಯ ಸಹಾಯಕ ನಿರ್ದೇಶಕರಿಗೆ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ.
ಅಡುಗೆ ನೌಕರರಿಗೆ ತುಂಬಾ ಅನ್ಯಾಯವಾಗುತ್ತಿದ್ದು, ವಯಕ್ತಿಕ ಜೀವನ ನಡೆಸಲು ತುಂಬಾ ತೊಂದರೆಯಾಗಿದೆ. ಈ ಕೂಡಲೇ ಕೆಲಸದಿಂದ ವಜಾ ಮಾಡಿರುವ ಅಡುಗೆ ನೌಕರರನ್ನು ವಾಪಸ್ ತೆಗೆದುಕೊಳ್ಳಬೇಕು. ಇದಕ್ಕೆ ಕುಮ್ಮಕ್ಕು ನೀಡಿರುವ ಗ್ರಾಮ ಪಂಚಾಯಿತಿ ಸದಸ್ಯನ ವಿರುದ್ಧ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು. ಆತನ ಸದಸ್ಯತ್ವವನ್ನು ರದ್ದುಪಡಿಸಬೇಕು. ಸ್ಥಳಕ್ಕೆ ಶಾಸಕರಾದ ದರ್ಶನ್ ಧ್ರುವನಾರಾಯಣ್ ರವರು ಬರುವತನಕ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದರು.
ನಮ್ಮ ಹೋರಾಟವನ್ನು ಹತ್ತಿಕ್ಕಲು ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಸೋಮಶೇಖರ್ ರವರು ವಾಟ್ಸಪ್ ಮೂಲಕ ಮೆಸೇಜ್ ಹಾಕಿದ್ದಾರೆ. ಹೋರಾಟಕ್ಕೆ ಅಡುಗೆ ಸಿಬ್ಬಂದಿಗಳು ಹೋಗಬಾರದು. ಒಂದು ವೇಳೆ ಹೋರಾಟಕ್ಕೆ ಹೋಗಿ ಭಾಗವಹಿಸಿದರೆ ಅಂತಹ ಅಡುಗೆ ಸಿಬ್ಬಂದಿಗಳನ್ನು ಕೆಲಸದಿಂದ ತೆಗೆಯುತ್ತೇವೆ ಎಂದು ಮೆಸೇಜ್ ಹಾಕಿದ್ದಾರೆ. ಇದರಿಂದ ಹೆದರಿಕೊಂಡು ನಮ್ಮ ಅಡುಗೆ ನೌಕರರು ಪ್ರತಿಭಟನೆಗೆ ಬಂದಿಲ್ಲ. ಇಂತಹ ಅಧಿಕಾರಿಗಳ ವಿರುದ್ಧವೂ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಿಐಟಿಯೂ ಜಿಲ್ಲಾಧ್ಯಕ್ಷ ಬಾಲಾಜಿ, ದಲಿತ ಸಂಘರ್ಷ ಸಮಿತಿಯ ಸಂಚಾಲಕರಾದ ಬೊಕ್ಕಹಳ್ಳಿ ಲಿಂಗಯ್ಯ, ರಾಜಶೇಖರ್ ಶೇಕಿ, ದೇವರಸನಹಳ್ಳಿ ಮಹದೇವಸ್ವಾಮಿ, ಕಾರ್ಯದರ್ಶಿ ರತ್ನಮ್ಮ, ನೀಲಮ್ಮ, ನಾಗಮ್ಮ, ಕಮಲಾಕ್ಷಿ, ಆಶಾ, ಸಾಕಮ್ಮ, ಶೋಭಾ, ಸವಿತಾ, ಸುವರ್ಣ ಸೇರಿದಂತೆ ಹಲವರು ಹಾಜರಿದ್ದರು.

