ನಂಜನಗೂಡು: ಇತ್ತಿಚಿನ ಯುವ ಜನತೆಯಲ್ಲಿ ತಾಳ್ಮೆ ಇಲ್ಲ. ವಿದ್ಯಾರ್ಥಿಗಳಿಗೆ ತಾಳ್ಮೆ ಮತ್ತು ನಡವಳಿಕೆ ಇದ್ದರೆ ಏನನ್ನಾದರೂ ಸಾಧಿಸಬಹುದು ಎಂದು ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಲಯನ್ ಸಿ.ಆರ್ ದಿನೇಶ್ ಹೇಳಿದರು.
ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಅನುಭವದ ಶಿಕ್ಷಣ ಬೇಕಾಗಿದೆ. ಪ್ರತಿ ನಿತ್ಯ ದಿನಪತ್ರಿಕೆಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿಬೇಕು. ವ್ಯಕ್ತಿ ಬದಲಾವಣೆಗೆ ದಿನಪತ್ರಿಕೆಗಳು ಮಹತ್ವಹೊಂದಿವೆ. ಮುದ್ರಣ ಮಾಧ್ಯಮವೂ ಸತ್ಯದಿಂದ ಕೂಡಿರುತ್ತದೆ. ದಿನೇ ದಿನೇ ಸಾಧಕರ ಸಂಖ್ಯೆ ಕಡಿಮೆಯಾಗುತ್ತಿದೆ.
ಗ್ರಾಮೀಣ ಪ್ರದೇಶದ ಮಕ್ಕಳಿಗೆ ಸಲಹೆ ಸೂಚನೆಗಳು ಸರಿಯಾಗಿ ಸಿಗುತ್ತಿಲ್ಲ. ಮಕ್ಕಳು ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ಆಸಕ್ತಿ ತೋರಿಸಿದರೆ ತಮ್ಮ ಪ್ರತಿಭೆಯನ್ನು ಹೊರಹಾಕಲು ಅವಕಾಶ ಸಿಗುತ್ತದೆ. ವಿದ್ಯಾರ್ಥಿಗಳ ಮುಂದಿನ ವ್ಯಾಸಂಗ ಭವಿಷ್ಯವನ್ನು ರೂಪಿಸುತ್ತದೆ. ವಿದ್ಯಾರ್ಥಿಗಳಿಗೆ ನಡವಳಿಕೆ ತುಂಬಾ ಮುಖ್ಯ.
ಜೀವಿತಾವಧಿ ಇರುವ ತನಕ ನಡವಳಿಕೆಗೆ ಇರಬೇಕು. ಹೊಸ ವಿಷಯಗಳನ್ನು ಗ್ರಹಿಸಿಕೊಳ್ಳಬೇಕು. ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು ಮೊಟಕು ಮಾಡದೇ ಮುಂದುವರಿಸಬೇಕು. ಇತ್ತಿಚಿನ ಯುವ ಜನತೆಯಲ್ಲಿ ತಾಳ್ಮೆ ಇಲ್ಲ. ತಾಳ್ಮೆ ಇದ್ದರೆ ಏನಾದರೂ ಸಾಧಿಸಬಹುದು ಎಂದು ಕಿವಿಮಾತು ಹೇಳಿದರು.
ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಹೆಚ್.ಎಂ ಬಸವರಾಜು ಮಾತನಾಡಿ, ವಿದ್ಯಾರ್ಥಿಗಳು ಪಠ್ಯಚಟುವಟಿಕೆಯ ಜತೆಯಲ್ಲಿ ಕ್ರೀಡೆ, ಸಾಂಸ್ಕೃತಿಕ ಪ್ರತಿಭಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಅಗತ್ಯವಿದೆ. ಪಠ್ಯ ಶಿಕ್ಷಣ, ಕ್ರೀಡೆ ಹಾಗೂ ಕಲೆ ಮತ್ತು ಸಂಸ್ಕೃತಿ ವಿಭಾಗಳು ಶಿಕ್ಷಣದ ಅವಿಭಾಜ್ಯ ಅಂಗವಾಗಿರುವುದನ್ನು ವಿದ್ಯಾರ್ಥಿಗಳು ಮತ್ತು ಪೋಷಕರು ಅರಿತುಕೊಳ್ಳಬೇಕು. ಶಿಕ್ಷಣ ಕ್ಷೇತ್ರ ಅಭಿವೃದ್ಧಿ ಹೊಂದಿದಷ್ಟೆ, ಕ್ರೀಡಾ ಮತ್ತು ಕಲೆ-ಸಂಸ್ಕೃತಿ ಕ್ಷೇತ್ರ ಅಭಿವೃದ್ಧಿ ಸಾಧಿಸುತ್ತದೆ. ಈ ಎರಡು ಕ್ಷೇತ್ರಗಳು ಬೆಳವಣಿಗೆಯಾಗಬೇಕಾದರೆ ಶಾಲಾ-ಕಾಲೇಜುಗಳಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಕ್ರೀಡೆ, ಕಲೆ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಹುಲ್ಲಹಳ್ಳಿ ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲರಾದ ಸೋಮಶೇಖರ್ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಇನ್ನೂ ಪಿಯುಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳಿಸಿದ ಅಪ್ಸನಾ, ನವೀನ್ ಕುಮಾರ್, ಅರುಣ್ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲದಾದ ಲಯನ್ ಸಿಆರ್ ದೀನೇಶ್, ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಹೆಚ್.ಎಂ. ಬಸವರಾಜು, ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಹುಚ್ಚಯ್ಯ, ಪ್ರಾಂಶುಪಾಲರಾದ ಸೋಮಶೇಖರ್, ಉಪ ಪ್ರಾಂಶುಪಾಲರಾದ ರಾಮಪ್ಪ, ಪತ್ರಕರ್ತರಾದ ಸಿಎಂ ಸುಗಂಧರಾಜು, ದೈಹಿಕ ಶಿಕ್ಷಣ ಶಿಕ್ಷಕ ಚಂದ್ರಶೇಖರ್, ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ರವಿ, ಹಿರಿಯ ಪತ್ರಕರ್ತ ಸಮಿಉಲ್ಲಾ ಸೇರಿದಂತೆ ಉಪನ್ಯಾಸಕರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

