ನಂಜನಗೂಡು: ತಾಲ್ಲೂಕಿನ ದೊಡ್ಡಕವಲಂದೆ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 2026-2027ನೇ ಶೈಕ್ಷಣಿಕ ವರ್ಷದ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭವು ಶನಿವಾರ ನಡೆಯಿತು.

ಕಾಲೇಜಿನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ನಜೀಮ್ ಉಲ್ಲಾ ಖಾನ್ ಅವರು ದೀಪ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪಠ್ಯದ ಜೊತೆಗೆ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳು ಅತ್ಯಗತ್ಯ. ಕಾಲೇಜು ಅಭಿವೃದ್ಧಿ ಸಮಿತಿಯು ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಲು ಸದಾ ಸಿದ್ಧವಿದೆ. ನಿಮ್ಮಲ್ಲಿ ಅಡಗಿರುವ ಕಲೆಯನ್ನು ವೇದಿಕೆಯ ಮೇಲೆ ತೋರಿಸಿ, ಶಿಸ್ತು ಮತ್ತು ಸಮಯಪ್ರಜ್ಞೆಯಿಂದ ಮುಂದೆ ಬನ್ನಿ ಎಂದು ಹೇಳಿದರು.

ಭಾಷಣಕಾರರಾಗಿ ಆಗಮಿಸಿದ್ದ ಕನ್ನಡ ಉಪನ್ಯಾಸಕ ಚಿಕ್ಕಮಳಲಿ ಆರ್. ಮಹದೇವ್ ಮಾತನಾಡಿ, ಬದುಕು ಸುಂದರವಾಗಿದೆ. ಸ್ಪರ್ಧಾತ್ಮಕ ಯುಗದಲ್ಲಿ ನೀವು ಪ್ರಯತ್ನ ಮಾಡಲೇಬೇಕು. ಕೀಳರಿಮೆ ಬಿಟ್ಟು ಸಮಾನವಾಗಿ ಓದಬೇಕು. ಎಲ್ಲರಿಗೂ ಸಾಧನೆ ಮಾಡುವ ಶಕ್ತಿ ಇದೆ. ವಿದ್ಯಾರ್ಥಿಗಳಲ್ಲಿ ವಿವೇಕ, ವಿವೇಚನೆ ಇರಬೇಕು. ಉತ್ತಮ ಸ್ನೇಹಿತರನ್ನು ಆಯ್ದುಕೊಳ್ಳಿ. ಮೊಬೈಲ್ ಎಂಬುದು ಮುಳ್ಳಿನಂತಿದೆ, ಅಗತ್ಯವಿಲ್ಲದಿದ್ದಾಗ ಅದರಿಂದ ದೂರವಿರಿ. ಬಸವಣ್ಣ, ಡಾ.ಬಿ.ಆರ್.ಅಂಬೇಡ್ಕರ್, ಕುವೆಂಪು ಅವರ ತತ್ವ-ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ. ಸರಳಾ ಅವರು ಮಾತನಾಡಿ, ಕಾಲೇಜಿನ ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಮತ್ತು ಶಿಸ್ತಿನ ಬಗ್ಗೆ ಒತ್ತು ನೀಡಲಾಗುತ್ತಿದ್ದು, ವಿದ್ಯಾರ್ಥಿಗಳು ಕೇವಲ ಅಂಕಗಳಿಗೆ ಸೀಮಿತವಾಗದೆ, ವ್ಯಕ್ತಿತ್ವ ವಿಕಸನವಾಗಬೇಕು. ಕಾಲೇಜು ನಿಮ್ಮ ಬೆಳವಣಿಗೆಗೆ ಎಲ್ಲಾ ರೀತಿಯ ಅವಕಾಶಗಳನ್ನು ನೀಡುತ್ತಿದೆ. ಅದನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ತಾಲ್ಲೂಕು ವಿಸ್ತಾರಣಾಧಿಕಾರಿ ಲತಾದೇವಿ, ಹುಲ್ಲಹಳ್ಳಿ ಪಿಯು ಕಾಲೇಜಿನ ಪ್ರಾಂಶುಪಾಲ ಸೋಮಶೇಖರ್, ಕೋಣನೂರು ಗಂಗಾಧರೇಶ್ವರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ನಾಗಲಿಂಗಪ್ರಭು, ಉಪನ್ಯಾಸಕರಾದ ಡಾ.ಶಶಿಧರ್, ಯೋಗೇಶ್, ಮೇನಕಾರಾಣಿ, ಹೇಮಾ, ನಟರಾಜು, ಮಹಾಲಿಂಗು, ಮಹದೇವಸ್ವಾಮಿ, ಗೀತಾ, ಅಶ್ವಿನಿ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.