ನಂಜನಗೂಡು: ತಾಲ್ಲೂಕಿನ ಚಿಕ್ಕ ಕವಲಂದೆ, ದೊಡ್ಡ ಕವಲಂದೆ ಹಾಗೂ ಗಟ್ಟವಾಡಿ ಗ್ರಾಮಗಳಲ್ಲಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರು ಬರ ಪರಿಸ್ಥಿತಿಯ ಪರಿಶೀಲನೆ ನಡೆಸಿದರು. ಜೋಳ, ಸೂರ್ಯಕಾಂತಿ ಸೇರಿದಂತೆ ವಿವಿಧ ಬೆಳೆಗಳನ್ನು ರೈತರ ಜಮೀನುಗಳಿಗೆ ತೆರಳಿ ವೀಕ್ಷಿಸಿದರು.
ಈ ಸಂದರ್ಭದಲ್ಲಿ ನಂಜನಗೂಡು ಶಾಸಕ ದರ್ಶನ್ ಧ್ರುವನಾರಾಯಣ್ ಅವರು ಉಪಮುಖ್ಯಮಂತ್ರಿಗಳಿಗೆ ಸಾಥ್ ನೀಡಿದರು. ಗಟ್ಟವಾಡಿ ಗ್ರಾಮದ ರೈತ ಮಹದೇವಪ್ಪ ಮತ್ತು ಶಿವಬಸಪ್ಪ ಅವರ ಜಮೀನಿಗೆ ಭೇಟಿ ನೀಡಿ ಬೆಳೆ ಪರಿಸ್ಥಿತಿಯನ್ನು ಪರಿಶೀಲಿಸಿದ ಡಾ.ಜಿ. ಪರಮೇಶ್ವರ್ ಅವರು, ನಂಜನಗೂಡು ತಾಲೂಕಿನಲ್ಲಿ ಬರ ವೀಕ್ಷಣೆಗೆ ಬಂದಿದ್ದೇನೆ. ಮಳೆಯ ಕೊರತೆಯಿಂದ ಜೋಳ ಹಾಗೂ ಸೂರ್ಯಕಾಂತಿ ಸೇರಿದಂತೆ ಹಲವು ಬೆಳೆಗಳು ಒಣಗಿ ನಾಶವಾಗಿವೆ ಎಂದು ಹೇಳಿದರು.
ರೈತರು ಸಾಲ ಮಾಡಿಕೊಂಡು ಸಾವಿರಾರು ರೂಪಾಯಿ ವೆಚ್ಚ ಮಾಡಿ ಬೆಳೆ ಬೆಳೆದಿದ್ದಾರೆ. ಆದರೆ ಮಳೆ ಇಲ್ಲದೆ ಬೆಳೆಗಳು ನಾಶವಾಗಿರುವುದರಿಂದ ರೈತರು ಜೀವನ ನಡೆಸುವುದೇ ಕಷ್ಟಕರವಾಗಿದೆ. ಈ ಗಂಭೀರ ಪರಿಸ್ಥಿತಿಯ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ದೊಡ್ಡ ಕವಲಂದೆ ಭಾಗಕ್ಕೆ ನೀರಾವರಿ ಯೋಜನೆ ಜಾರಿಗೆ ತರುವ ನಿಟ್ಟಿನಲ್ಲಿ ಶಾಸಕ ದರ್ಶನ್ ಧ್ರುವನಾರಾಯಣ್ ಅವರು ಕೆಲಸ ಮಾಡಲಿದ್ದಾರೆ ಎಂದರು.
ರೈತರ ಅಸಮಾಧಾನ
ಇದೇ ವೇಳೆ ಪತ್ರಕರ್ತರು ಸ್ಮಶಾನ ಭೂಮಿ ಸಮಸ್ಯೆ ಕುರಿತು ಕಂದಾಯ ಸಚಿವರ ಗಮನ ಸೆಳೆಯಲು ಪ್ರಯತ್ನಿಸಿದರೂ, ಅವರು ಯಾವುದೇ ಪ್ರತಿಕ್ರಿಯೆ ನೀಡದೆ ಮುಂದುವರಿದರು.
ಬರ ಪರಿಶೀಲನಾ ಪ್ರವಾಸವು ಕೇವಲ ಕೆಲವೇ ನಿಮಿಷಗಳಿಗೆ ಸೀಮಿತವಾಗಿದ್ದು, ರೈತರಿಗೆ ತಮ್ಮ ಸಮಸ್ಯೆಗಳನ್ನು ಸಂಪೂರ್ಣವಾಗಿ ವಿವರಿಸಲು ಅವಕಾಶ ದೊರೆಯಲಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದರು. ಸ್ಥಳದಲ್ಲಿದ್ದ ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿ ರೈತರನ್ನು ಉಪಮುಖ್ಯಮಂತ್ರಿಗಳ ಬಳಿ ತೆರಳಿ ಸಮಸ್ಯೆ ಹೇಳಲು ಅವಕಾಶ ನೀಡಲಿಲ್ಲ ಎಂಬ ಆರೋಪವೂ ರೈತರಿಂದ ಕೇಳಿಬಂದಿದೆ.
“ಬರ ಪ್ರವಾಸವು ಕೇವಲ ನಾಮಕಾವಸ್ಥೆಗೆ ಮಾತ್ರ ಸೀಮಿತವಾಗಿದೆಯೇ?” ಎಂಬ ಪ್ರಶ್ನೆಯನ್ನು ರೈತರು ವ್ಯಕ್ತಪಡಿಸಿದ್ದು, ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಸರ್ಕಾರ ಕೂಡಲೇ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಶಾಸಕ ದರ್ಶನ್ ಧ್ರುವನಾರಾಯಣ್, ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ, ತಹಶೀಲ್ದಾರ್ ಡಾ. ಸ್ಮಿತಾ ರಾಮು, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆ.ಎಚ್. ರವಿ, ಸಹಾಯಕ ಕೃಷಿ ನಿರ್ದೇಶಕ ರವಿ, ಕವಲಂದೆ ಉಪ ತಹಶೀಲ್ದಾರ್ ಕಿರಣ್ ಕುಮಾರ್, ರಾಜಸ್ವ ನಿರೀಕ್ಷಕ ಹೆನ್ರಿ ಡಿಸೋಜಾ, ಡಾ.ಜಿ. ಪರಮೇಶ್ವರ್ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ ಹಾಗೂ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸಿ. ಮಂಜುನಾಥ್ ಸೇರಿದಂತೆ ಹಲವರು ಹಾಜರಿದ್ದರು.

