ಮೈಸೂರು: ಹೆಚ್.ಡಿ.ಕೋಟೆಯಿಂದ ಕಾಕನಕೋಟೆಗೆ ನೀವು ರಸ್ತೆ ಮಾರ್ಗವಾಗಿ ತೆರಳಬೇಕಿದ್ರೆ ನಿಮ್ಮ ಗುಂಡಿಗೆ ಹಾಗೂ ಮೈಯಲ್ಲಿರುವ ಮೂಳೆಗಳು ಗಟ್ಟಿ ಇರಬೇಕು. ಯಾಕಂತೀರಾ ಇದು ಕೇವಲ ನೆಪಮತ್ರಕ್ಕೆ ರಸ್ತೆ ಅಷ್ಟೆ. ಸಂಪೂರ್ಣವಾಗಿ ಹಳ್ಳಕೊಳ್ಳಗಳಿಂದ ತುಂಬಿದೆ. ಹೆಜ್ಜೆ ಹೆಜ್ಜೆಗೂ ಹಳ್ಳಗಳು ನಿಮ್ಮ ಸುಖಕರ ಪ್ರಯಾಣಕ್ಕೆ ಸವಾಲು ಎಸೆಯುತ್ತೆ.ಮಳೆ ಬಂದರಂತೂ ಪ್ರಯಾಣಿಕರು ಸುಸ್ತೋ ಸುಸ್ತು.

ಹೌದು, ಇದು ಸುಮಾರು 14 ಕಿಲೋ ಮೀಟರ್ ಇದೆ.ಇದರಲ್ಲಿರುವ ಗುಂಡಿಗಳು ಯಾವಾಗಲೂ ಅಭಿವೃದ್ದಿ ಮಂತ್ರ ಪಠಿಸುತ್ತಿರುವ ಸಿಎಂ ಸಿದ್ದರಾಮಯ್ಯನವರನ್ನ ಅಣಕಿಸುವಂತೆ ಮಾಡುತ್ತಿದೆ. ಈ ರಸ್ತೆ ಡಾಂಬರು ಕಂಡು ಎಷ್ಟು ವರ್ಷಗಳಾಗಿವೆಯೋ ಗೊತ್ತಿಲ್ಲ. ಇಲ್ಲಿ ಸಂಚಾರ ಮಾಡಬೇಕಂದ್ರೆ ನಿಮ್ಮ ಮೈಯಲ್ಲಿರೋ ನಟ್ಟು ಬೋಲ್ಟ್ ಗಳು ಸುಭದ್ರವಾಗಿರಬೇಕು. ಪ್ರಯಾಣ ಮುಗಿದ ನಂತರ ನೇರವಾಗಿ ಮೂಳೆ ತಜ್ಞರ ಬಳಿ ತೆರಬೇಕಾಗುತ್ತದೆ.

ಈ ರಸ್ತೆಯಲ್ಲಿ ಪ್ರತಿದಿನ ಸಾವಿರಾರು ವಾಹನಗಳು ಓಡಾಡುತ್ತವೆ. ಎಷ್ಟೋ ಬಾರಿ ಚಕ್ರಗಳು ರಸ್ತೆ ಗುಂಡಿಗೆ ಸಿಲುಕಿ ಪರದಾಡಿದ ಉದಾಹರಣೆಗಳೂ ಇವೆ. ಐಶಾರಾಮಿ ವಾಹನಗಳಲ್ಲಿ ಓಡಾಡುವ ನಮ್ಮ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಈ ರಸ್ತೆಯ ಎಫೆಕ್ಟ್ ಗೊತ್ತೇ ಇಲ್ಲ. ಒಮ್ಮೆ ಸರ್ಕಾರಿ ವಾಹನದಲ್ಲಿ ಈ ರಸ್ತೆಯಲ್ಲಿ ತೆರಳಿದ್ರೆ ಸಾಕು ನರಕಯಾತನೆ ಏನೆಂಬುದು ಅರಿವಾಗುತ್ತದೆ.

ರಸ್ತೆಗಳ ಅಭಿವೃದ್ದಿಗಾಗಿ ಸರ್ಕಾರ ಕೋಟ್ಯಾಂತರ ಹಣ ಖರ್ಚು ಮಾಡುತ್ತಿದೆ. ಆದ್ರೆ ಈ ರಸ್ತೆ ಮಾತ್ರ ದಿನೇ ದಿನೇ ಹದಗೆಡುತ್ತಲೇ ಇದೆ. ಈ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರು ಈಗಾಗಲೇ ಹೈರಾಣರಾಗಿದ್ದಾರೆ. ಸ್ಥಳೀಯರು ಸಹನೆ ಕಳೆದುಕೊಳ್ಳುವ ಮುನ್ನ ಈ ರಸ್ತೆಯನ್ನ ಅಭಿವೃದ್ದಿಪಡಿಸಬೇಕಿದೆ. ಇಲ್ಲದಿದ್ದಲ್ಲಿ ಸರ್ಕಾರ ಸ್ಥಳೀಯರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ.