ನಂಜನಗೂಡು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಚಿತ್ರನಗರಿ ನಿರ್ಮಾಣ ಹೆಸರಲ್ಲಿ ಬಡಕುಟುಂಬಗಳನ್ನ ಬೀದಿಪಾಲು ಮಾಡುವ ಹುನ್ನಾರ ನಂಜನಗೂಡು ತಾಲ್ಲೂಕು ಇಮ್ಮಾವು ಗ್ರಾಮದಲ್ಲಿ ನಡೆಯುತ್ತಿದೆ.

ನಾಲ್ಕಾರು ತಲೆಮಾರುಗಳಿಂದ ವಾಸ ಮಾಡುತ್ತಿರುವ ಬಡಕುಟುಂಬಗಳನ್ನ ಒಕ್ಕಲೆಬ್ಬಿಸುವ ಬೆಳವಣಿಗೆ ಆಗುತ್ತಿದೆ. ಕೆಐಎಡಿಬಿ ಅಧಿಕಾರಿಗಳ ಧೋರಣೆಗೆ ಬಡಕುಟುಂಬಗಳ ಸಹನೆ ಕಟ್ಟೆ ಒಡೆದಿದೆ. ರಾತ್ರೋ ರಾತ್ರಿ ಎತ್ತಂಗಡಿ ಮಾಡಲು ಯತ್ನಿಸುತ್ತಿರುವ ಅಧಿಕಾರಿಗಳ ವರ್ತನೆಗೆ ಬೇಸತ್ತ ನಿವಾಸಿಗಳು ತಾಲ್ಲೂಕು ಕಛೇರಿ ಮುತ್ತಿಗೆ ಹಾಕಲು ನಿರ್ಧರಿಸಿದ್ದಾರೆ.

ಇಮ್ಮಾವು ಗ್ರಾಮದ ಸರ್ವೆ ನಂ.384,386,387,388,389,437,438 ರಲ್ಲಿ ಒಟ್ಟು 53.08 ಎಕ್ರೆ ಪ್ರದೇಶದಲ್ಲಿ ಇಮ್ಮಾವು ಗ್ರಾಮದ ಸಾಬರಹುಂಡಿ ಗ್ರಾಮದಲ್ಲಿ ಮುಸ್ಲಿಂ ಸಮುದಾಯದ ನಿವಾಸಿಗಳು ಪೂರ್ವಿಕರ ಕಾಲದಿಂದಲೂ ಉಳುಮೆ ಮಾಡಿ ಬದುಕು ಕಟ್ಟಿಕೊಂಡಿದ್ದಾರೆ. ಸದರಿ ಸ್ಥಳದ ಮೇಲೆ ಕಣ್ಣು ಹಾಕಿರುವ ಅಧಿಕಾರಿಗಳು, ಬಡ ಕುಟುಂಬಗಳ ಒಕ್ಕಲೆಬ್ಬಿಸಲು ಮುಂದಾಗಿದ್ದಾರೆ. ರಾತ್ರೋ ರಾತ್ರಿ ಜೆಸಿಬಿ ತಂದು ಪೊಲೀಸರ ಸಮ್ಮುಖದಲ್ಲಿ ಮನೆಗಳನ್ನ ಕೆಡವಲು ಮುಂದಾಗಿದ್ದಾರೆ.

ಮೈಸೂರಿನಿಂದ ಬಂದ ಪೊಲೀಸರು ಅಧಿಕಾರಿಗಳ ನೆರವಿಗೆ ನಿಂತು ನಮ್ಮಗಳ ಮೇಲೆ ಹಲ್ಲೆ ನಡೆಸುತ್ತಿದ್ದಾರೆ ಎಂದು ಆರೋಪಿಸಿರುವ ನಿವಾಸಿಗಳು, ಕೂಡಲೇ ಸರ್ಕಾರ ಮಧ್ಯ ಪ್ರವೇಶಿಸಿ ಸಮಸ್ಯೆಗೆ ಪರಿಹಾರ ಕಲ್ಪಿಸುವಂತೆ ಮನವಿ ಮಾಡಿದ್ದಾರೆ. ಇಲ್ಲದಿದ್ದಲ್ಲಿ ತಾಲ್ಲೂಕು ಕಛೇರಿ ಮುತ್ತಿಗೆ ಹಾಕಿ,

ಸಾಮೂಹಿಕ ಆತ್ಮಹತ್ಯೆಗೆ ಮುಂದಾಗುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಚುನಾವಣೆ ಬಂದಾಗ ಮತಯಾಚಿಸಲು ಬರುವ ಪ್ರತಿನಿಧಿಗಳು ಇದೀಗ ಇತ್ತ ಸುಳಿಯುತ್ತಿಲ್ಲ. ಅಧಿಕಾರಿಗಳಿಗಂತೂ ನಮ್ಮ ಕೂಗು ಕೇಳಿಸುತ್ತಿಲ್ಲ. ಕೂಡಲೇ ಮುಖ್ಯಮಂತ್ರಿಗಳು ಇತ್ತ ಗಮನ ಹರಿಸುವಂತೆ ಒತ್ತಾಯಿಸಿದ್ದಾರೆ.