ನಂಜನಗೂಡು: ದಕ್ಷಿಣ ಕಾಶಿ ಖ್ಯಾತಿಯ ಶ್ರೀ ನಂಜುಂಡೇಶ್ವರ ಸ್ವಾಮಿ ದೇವಾಲಯದಲ್ಲಿ ಮಂಗಳವಾರ ನಡೆದ ಹುಂಡಿ ಎಣಿಕೆ ಕಾರ್ಯದಲ್ಲಿ ದಾಖಲೆಯ ಪ್ರಮಾಣದಲ್ಲಿ 3 ಕೋಟಿ ರೂ ಕಾಣಿಕೆ ಸಂಗ್ರಹವಾಗಿದೆ.
ದೇವಾಲಯದ ದಾಸೋಹ ಭವನದ ಆವರಣದಲ್ಲಿ ನಡೆದ ಎಣಿಕೆ ಕಾರ್ಯದಲ್ಲಿ 3,02,63,795 ರೂ ಜತೆಗೆ 82 ಗ್ರಾಂ 800 ಮಿಲಿ ಗ್ರಾಂ. ಚಿನ್ನ, 2 ಕೆಜಿ 680 ಗ್ರಾಂ ಬೆಳ್ಳಿ, 34 ವಿದೇಶಿ ಕರೆನ್ಸಿಗಳು ಭಕ್ತಾದಿಗಳ ಕಾಣಿಕೆ ರೂಪದಲ್ಲಿ ಬಂದಿವೆ.

ಕಾರ್ತೀಕ ಮಾಸ ಹಾಗೂ ಹಬ್ಬ ಹರಿದಿನಗಳ ಹಿನ್ನೆಲೆ, ಈ ಬಾರಿ ಕೇರಳ, ತಮಿಳುನಾಡು, ಆಂಧ್ರಪ್ರದೇಶ ಹಾಗೂ ಉತ್ತರ ಭಾರತ ಮತ್ತು ದೇಶ ವಿದೇಶದಿಂದ ಬರುವವರ ಸಂಖ್ಯೆ ಹೆಚ್ಚಾಗಿದೆ. ಈ ಕಾರಣದಿಂದ ದೇಗುಲಕ್ಕೆ ಹೆಚ್ಚಾಗಿ ಕಾಣಿಕೆ ಹಣ ಹರಿದುಬಂದಿದೆ.
ಇದರ ಪರಿಣಾಮ ಹುಂಡಿಯಲ್ಲಿ ದಾಖಲೆ ಮೊತ್ತದ ಕಾಣಿಕೆ ಸಂಗ್ರಹವಾಗಿದೆ ಎಂದು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್ ಕುಮಾರ್ ತಿಳಿಸಿದ್ದಾರೆ. ಹುಂಡಿ ಎಣಿಕೆ ಕಾರ್ಯದಲ್ಲಿ ಸುಮಾರು 50 ಕ್ಕೂ ಹೆಚ್ಚು ದೇವಾಲಯದ ಸಿಬ್ಬಂದಿಗಳು ಹಾಗೂ ಮಹಿಳಾ ಸ್ವಸಹಾಯ ಸಂಘದ ಮಹಿಳೆಯರು ಕೆನರಾ ಬ್ಯಾಂಕ್ ಸಿಬ್ಬಂದಿಗಳು ಭಾಗವಹಿಸಿದ್ದರು.

