ನಂಜನಗೂಡು: ಕೊನೆಗೂ ಹುಲ್ಲಹಳ್ಳಿ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಬೀದಿನಾಯಿಗಳ ಹಾವಳಿ ನಿಯಂತ್ರಣಕ್ಕೆ ಮುಂದಾಗಿದ್ದಾರೆ. ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವಿವಿಧ ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸಿ ಸುಮಾರು 150 ಕ್ಕೂ ಹೆಚ್ಚು ಬೀದಿ ನಾಯಿಗಳನ್ನು ಸೆರೆಹಿಡಿದು ಸಂತಾನಹರಣ ಚಿಕಿತ್ಸೆ ಮಾಡಿ ಬಿಡುಗಡೆ ಮಾಡಿದ್ದಾರೆ.
ಇತ್ತೀಚೆಗೆ 20 ಕ್ಕೂ ಹೆಚ್ಚುಮಕ್ಕಳ ಮೇಲೆ ದಾಳಿ ಮಾಡಿದ್ದ ಬೀದಿ ನಾಯಿಗಳು ಆತಂಕ ಸೃಷ್ಟಿಸಿದ್ದವು. ಗ್ರಾಮಸ್ಥರ ಆಕ್ರೋಶಕ್ಕೆ ಒಂದು ಹುಚ್ಚು ನಾಯಿ ಬಲಿಯಾಗಿತ್ತು. ಈ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಮಾಡಲಾಗಿತ್ತು. ಹೀಗಾಗಿ ಎಚ್ಚೆತ್ತ ಅಧಿಕಾರಿಗಳು ಕಾರ್ಯಾಚರಣೆ ಇಳಿದು ಬೀದಿನಾಯಿಗಳ ಹಾವಳಿಗೆ ಬ್ರೇಕ್ ಹಾಕಲು ಮುಂದಾಗಿದ್ದಾರೆ.
ಒಟ್ಟಾರೆ ಹುಲ್ಲಹಳ್ಳಿ ನಿವಾಸಿಗಳ ನಿದ್ದೆ ಕೆಡಿಸಿದ್ದ ಬೀದಿನಾಯಿಗಳ ಕಾಟಕ್ಕೆ ಮುಕ್ತಿ ನೀಡಲು ಅಧಿಕಾರಿಗಳು ಮುಂದಾಗಿದ್ದಾರೆ. ನಂಜನಗೂಡು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜೆರಾಲ್ಡ್ ರಾಜೇಶ್ ಆದೇಶದ ಮೇರೆಗೆ ಹುಲ್ಲಹಳ್ಳಿ ಪಿಡಿಒ ಶ್ರೀಧರ್ ಕ್ರಮ ಕೈಗೊಂಡಿದ್ದಾರೆ.

