ನಂಜನಗೂಡು: ಭಾರತೀಯ ಸೈನಿಕರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ನಗರದ ಚಿಂತಾಮಣಿ ಗಣಪತಿ ದೇವಸ್ಥಾನದಿಂದ ರಾಷ್ಟ್ರಪತಿ ರಸ್ತೆಯ ಮುಖಾಂತರ ಶ್ರೀ ನಂಜುಂಡೇಶ್ವರ ಸ್ವಾಮಿ ದೇವಾಲಯದವರೆಗೆ ಬೃಹತ್ ತಿರಂಗಾ ಯಾತ್ರೆ ನಡೆಸಲಾಯಿತು.
ಮಾಜಿ ಶಾಸಕ ಬಿ.ಹರ್ಷವರ್ಧನ್ ನೇತೃತ್ವದಲ್ಲಿ ತಿರಂಗಾ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು. ಆಪರೇಷನ್ ಸಿಂಧೂರ ಯಶಸ್ವಿಯಾದ ಹಿನ್ನೆಲೆಯಲ್ಲಿ ರಸ್ತೆಯೂದ್ದಕ್ಕೂ ಭಾರತೀಯ ಸೈನಿಕರಿಗೆ ಜಯವಾಗಲಿ ಎಂದು ಜಯಘೋಷ ಕೂಗಿ ಸಾಗಿದರು. ಮಾಜಿ ಶಾಸಕ ಬಿ.ಹರ್ಷವರ್ಧನ್ ಮಾತನಾಡಿ, ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರನ್ನು ಪಾಕಿಸ್ತಾನದ ಉಗ್ರರು 26 ಜನರನ್ನು ದಾರುಣ್ಯವಾಗಿ ಹತ್ಯೆ ಮಾಡಿದರು.

ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ದಾಳಿಯ ಪ್ರತೀಕವಾಗಿ ಭಾರತ ಸರ್ಕಾರವು ಅಪರೇಷನ್ ಸಿಂಧೂರ ಎಂಬ ಸಂದೇಶದ ಮೂಲಕ ಉಗ್ರರಿಗೆ ಎಚ್ಚರಿಕೆ ನೀಡಿದ್ದಾರೆ. ಇವತ್ತು ನಮ್ಮ ಭಾರತದ ಯೋಧರಿಗೆ ಅಭಿನಂದನೆ ಸಲ್ಲಿಸುವ ಸಲುವಾಗಿ ಈ ವಿಜಯೋತ್ಸವ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಪಕ್ಷಾತೀತವಾಗಿ ವಿವಿಧ ಸಂಘಟನೆಗಳು ,ಮುಸ್ಲಿಂ ಧರ್ಮದ ಮೌಲಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಮುಂದಿನ ದಿನಗಳಲ್ಲಿ ಪಾಕಿಸ್ತಾನದ ಉಗ್ರಗಾಮಿಗಳು ನಮ್ಮ ದೇಶದ ನೆಲಕ್ಕೆ ಬಂದು ದಾಳಿ ಮಾಡಿದರೆ ಪಾಕಿಸ್ತಾನ ಸರ್ವನಾಶವಾಗಲಿದೆ ಎಂದು ಎಚ್ಚರಿಕೆ ನೀಡಿದರು.

ಯಾತ್ರೆಯಲ್ಲಿ ಬಿಜೆಪಿ ಪಕ್ಷದ ಮುಖಂಡ ಎಸ್. ಮಹಾದೇವಯ್ಯ ಜೆಡಿಎಸ್ ಮುಖಂಡ ನರಸಿಂಹ ಸ್ವಾಮಿ, ಮಹದೇವಸ್ವಾಮಿ, ಕೆಂಡಗಣ್ಣಪ್ಪ , ಮಾಜಿ ಜಿಲ್ಲಾ ಜಿಪಂ ಸದಸ್ಯ ಚಿಕ್ಕರಂಗನಾಯಕ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಲತಾ, ಬಿಜೆಪಿ ಕಾರ್ಯಕಾರಿಣಿ ಸಮಿತಿಯ ಸದಸ್ಯ ಹೆಮ್ಮರಗಾಲ ಸೋಮಣ್ಣ, ನಗರಾಧ್ಯಕ್ಷ ಸಿದ್ದರಾಜು, ಹೆಡತಲೆ ಸಿದ್ದರಾಜು, ನಗರಸಭಾ ಸದಸ್ಯ ಮಹದೇವಪ್ರಸಾದ್, ಸೇರಿದಂತೆ ಹಲವರು ಭಾಗವಹಿಸಿದ್ದರು.

