ನಂಜನಗೂಡು: ಕಪಿಲಾ ನದಿ ತಟದಲ್ಲಿ ನೆಲೆಗೊಂಡಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ನಡೆಯುತ್ತಿರುವ 28ನೇ ಬ್ರಹ್ಮೋತ್ಸವದ ಅಂಗವಾಗಿ ಶನಿವಾರ ಬೃಹತ್ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು.

ದೇವಾಲಯದ ಗುರುಸ್ವಾಮಿಗಳಾದ ಶ್ರೀ ದೇವರಾಜ ಸ್ವಾಮಿಗಳವರ ನೇತೃತ್ವದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಸುಮಾರು ರೂ. 20,000 ಭಕ್ತರಿಗೆ ಸಿಹಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು  ಬೋದಿ ಪಾಯಸ, ಅನ್ನ ಸಾಂಬಾರ್, ಹುಳಿ, ರೈಸ್ ಬಾತ್ ಸೇರಿದಂತೆ ವಿವಿಧ ಖಾದ್ಯಗಳನ್ನು ಬೃಹತ್ ಗಾತ್ರದ ಪಾತ್ರೆಗಳಲ್ಲಿ ತಯಾರು ಮಾಡಲಾಗಿತ್ತು.

ಬೃಹತ್ ಅನ್ನದ ರಾಶಿ ಹಾಗೂ ಹುಳಿ ಪಾಯಸ ಸೇರಿದಂತೆ ಎಲ್ಲಾ ಖಾದ್ಯಗಳಿಗೂ ಸುಕ್ಷೇತ್ರ ಶ್ರೀ ಮಲ್ಲನ ಮೂಲೆ ಮಠದ ಸ್ವಾಮೀಜಿಗಳಾದ ಶ್ರೀ ಮುಮ್ಮಡಿ ಸಿದ್ದಲಿಂಗ ಸ್ವಾಮಿಗಳು ಪೂಜೆ ಸಲ್ಲಿಸಿದರು. ಪೂಜೆ ಬಳಿಕ ಬಂದ ಎಲ್ಲಾ ಭಕ್ತರಿಗೆ ಶ್ರೀಗಳು ಸೇರಿದಂತೆ ಶಾಸಕ ದರ್ಶನ್ ದ್ರುವನಾರಾಯಣ್ ಹಾಗೂ  ದಾನಿಗಳು ಸಿಹಿ ಬಡಿಸುವ ಮೂಲಕ ಬೃಹತ್ ಅನ್ನ ಸಂತರ್ಪಣೆಗೆ ಚಾಲನೆ ನೀಡಿದರು.

ಇದೇ ಸಂದರ್ಭ ಶಾಸಕ ದರ್ಶನ್ ದ್ರುವನಾರಾಯಣ್, ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಉದ್ಯಮಿಗಳಾದ ಇಂಧನ್ ಬಾಬು, ಶ್ರೀಕಂಠೇಗೌಡ ಸೇರಿದಂತೆ ಹಲವಾರು ಮುಖಂಡರು ದೇವಾಲಯಕ್ಕೆ ತೆರಳಿ ಶ್ರೀ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದು ತಮ್ಮ ಭಕ್ತಿ ಭಾವ ಮೆರೆದರು.

ಅನ್ನ ಸಂತರ್ಪಣೆಯಲ್ಲಿ ರಾಜ್ಯದ ನಾನಾ ಮೂಲೆಗಳಿಂದ ಬಂದ ಅಯ್ಯಪ್ಪ ಸ್ವಾಮಿ ಭಕ್ತರು ಹಾಗೂ ಮೈಸೂರು,ಚಾಮರಾಜನಗರ, ನಂಜನಗೂಡು ಸೇರಿದಂತೆ ವಿವಿಧ ಕಡೆಯಿಂದ ಸಾವಿರಾರು ಭಕ್ತರು ಪಾಲ್ಗೊಂಡು ಶ್ರೀ ಅಯ್ಯಪ್ಪ ಸ್ವಾಮಿಯ ಕೃಪೆಗೆ ಪಾತ್ರರಾದರು.

ಬಳಿಕ ಶಾಸಕ ದರ್ಶನ್ ದ್ರುವ ನಾರಾಯಣ್ ಮಾತನಾಡಿ ಕಳೆದ ಹಲವಾರು ವರ್ಷಗಳಿಂದ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಇಂತಹ ಸೇವೆ ಮಾಡಿಕೊಂಡು ಬರುತ್ತಿರುವ ಶ್ರೀ ದೇವರಾಜ ಸ್ವಾಮಿಗಳು ಹಾಗೂ ಅವರ ತಂಡದವರ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿ ನಾನು ಕೂಡ ಈ ದೇವಾಲಯದ ಭಕ್ತನಾಗಿ ನಿಮ್ಮೊಡನೆ ಸದಾ ಇರುವುದಾಗಿ ತಿಳಿಸಿದರು.

ಇದೇ ಸಂದರ್ಭ ದೇವಾಲಯದ ಪಕ್ಕದಲ್ಲಿರುವ ಕಪಿಲಾ ನದಿಯಲ್ಲಿನ ಜೊಂಡು ಮತ್ತು ತ್ಯಾಜ್ಯವನ್ನು ತೆಗೆಸಿ ನೀರು ಸರಾಗವಾಗಿ ಹರಿಯುವಂತೆ ಮಾಡುವುದಾಗಿಯೂ ಸಹ ತಿಳಿಸಿ ಆ ಸ್ಥಳವನ್ನು ವೀಕ್ಷಣೆ ಮಾಡಿದರು. ದೇವಾಲಯದ ಶ್ರೀ ಶಾಸ್ತ ಕಲಾಮಂಟಪದಲ್ಲಿ ನಂಜನಗೂಡಿನ ಶ್ರೀ ವಾರಿ ಭಜನಾ ಮಂಡಳಿ ಅವರಿಂದ ಭಜನಾ ಕಾರ್ಯಕ್ರಮವನ್ನು ಸಹ ಹಮ್ಮಿಕೊಳ್ಳಲಾಗಿತ್ತು.