ನಂಜನಗೂಡು: ಮಧ್ಯಾಹ್ನದ ಊಟ ಮುಗಿಸಿ ಕೈ ತೊಳೆಯಲು ಹೋದಾಗ ಕಾಲು ಜಾರಿ ಕೃಷಿ ಹೊಂಡಕ್ಕೆ ಬಿದ್ದು ಗೃಹಿಣಿಯೊಬ್ಬರು ಸಾವನ್ನಪ್ಪಿರುವ ಘಟನೆ ನಂಜನಗೂಡು ತಾಲ್ಲೂಕಿನ ಹರತಲೆ ಗ್ರಾಮದಲ್ಲಿ ನಡೆದಿದೆ.

ರೇಖಾ (36) ಮೃತ ದುರ್ದೈವಿ. ಭಾನುವಾರ ಮುಂಜಾನೆ ಎಂದಿನಂತೆ ಗ್ರಾಮದ ಬಳಿ ಇರುವ ಶುಂಠಿ ತೋಟದಲ್ಲಿ ಕೆಲಸಕ್ಕೆ ಹೋಗಿದ್ದ ರೇಖಾ, ಮಧ್ಯಾಹ್ನದ ಊಟ ಮುಗಿಸಿದ ಬಳಿಕ ಕೈ ತೊಳೆಯಲು ಹೋಗಿದ್ದಾರೆ. ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಕೃಷಿ ಹೊಂಡಕ್ಕೆ ಬಿದ್ದು ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ರೇಖಾ ಅವರು 10 ವರ್ಷಗಳ ಹಿಂದೆ ಚಾಮರಾಜನಗರ ಜಿಲ್ಲೆಯ ಕೆಬ್ಬೆಪುರ ಗ್ರಾಮದಿಂದ ಹರತಲೆ ಗ್ರಾಮಕ್ಕೆ ವಿವಾಹವಾಗಿ ಬಂದಿದ್ದರು. ಅವರಿಗೆ 17 ವರ್ಷದ ಮಗ, 14 ವರ್ಷದ ಮಗಳು ಮತ್ತು ಅಂಧ ಪತಿ ಇದ್ದಾರೆ. ಈ ಸಂಬಂಧ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.