ನಂಜನಗೂಡು: ದಕ್ಷಿಣ ಕಾಶಿ ನಂಜನಗೂಡು ನಗರದ ಹೃದಯ ಭಾಗದಲ್ಲಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ಗರ್ಭಿಣಿಯರು ಮತ್ತು ಬಾಣಂತಿಯರು ಪರದಾಡುವಂತಾಗಿದ್ದು, ಗರ್ಭಿಣಿಗೆ ಆಂಬುಲೆನ್ಸ್ ನಲ್ಲೇ ಚಿಕಿತ್ಸೆ ನೀಡುತ್ತಿರುವುದು ಮನಕಲಕುವಂತಿದೆ.
ಬೆಳಿಗ್ಗೆ 10 ಗಂಟೆಯಾದರೂ ಯಾವೊಬ್ಬ ವೈದ್ಯರು ಆಸ್ಪತ್ರೆಗೆ ಬಾರದಿರುವುದು ವೈದ್ಯರ ಬೇಜವಾಬ್ದಾರಿ ಎದ್ದು ಕಾಣುತ್ತಿದೆ. ನಂಜನಗೂಡು ತಾಲ್ಲೂಕಿನಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯೂ ದೊಡ್ಡಾಸ್ಪತ್ರೆಯಾಗಿದೆ. ಸಾಕಷ್ಟು ಗರ್ಭಿಣಿ ಮತ್ತು ಬಾಣಂತಿಯರು ಗಡಿ ಭಾಗದಿಂದಲೂ ಬರುತ್ತಾರೆ. ಆದರೆ, ಉತ್ತಮ ಸೇವೆ ಸಿಗುತ್ತಿಲ್ಲ.

ರಾತ್ರಿಯ ಪಾಳಿಯಲ್ಲಿ ವೈದ್ಯರಿಲ್ಲ, ಬೆಳಿಗ್ಗೆ ಆಸ್ಪತ್ರೆಗೆ ಬಂದರು ವೈದ್ಯರ ದರ್ಶನವಾಗಿಲ್ಲ. ಆಸ್ಪತ್ರೆಯಲ್ಲಿರುವ ಇಬ್ಬರು ಮಹಿಳಾ ವೈದ್ಯಾಧಿಕಾರಿಗಳ ಕಾರ್ಯವೈಕರಿಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾತ್ರಿ ವೇಳೆಯಲ್ಲಿ ವೈದ್ಯಕೀಯ ಸೇವೆ ಸ್ಥಗಿತವಾಗಿದ್ದು, ಗರ್ಭಿಣಿ ಮತ್ತು ಬಾಣಂತಿಯರು ಬಂದರೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ವೈದ್ಯರಿಲ್ಲದ ಕಾರಣ ಇಂದು ಆಂಬುಲೆನ್ಸ್ ನಲ್ಲಿಯೇ ಚಿಕಿತ್ಸೆ ನೀಡಲಾಗಿದೆ.

ನಂತರ ಮೈಸೂರಿನ ಆಸ್ಪತ್ರೆಗೆ ರವಾನಿಸಲಾಯಿತು. ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಮತ್ತು ಎಕ್ಸರೇ ಸೇವೆ ಇದ್ದರೂ ಕೂಡ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸ್ಥಗಿತವಾಗಿದ್ದು, ಸ್ಕ್ಯಾನಿಂಗ್ ಮತ್ತು ಎಕ್ಸರೇಗೆ ಖಾಸಗಿ ಆಸ್ಪತ್ರೆಗಳತ್ತ ಕಳುಹಿಸುತ್ತಿದ್ದಾರೆ. ಅಲ್ಲದೆ ಔಷಧಿಗಳನ್ನು ಖಾಸಗಿ ಮೆಡಿಕಲ್ ಗೆ ಬರೆಯುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪ ಕೇಳಿ ಬಂದಿದೆ. ಸಮಯಕ್ಕೆ ಸರಿಯಾಗಿ ಬಾರದೆ ನಿರ್ಲಕ್ಷ್ಯ ವಹಿಸಿರುವ ವೈದ್ಯರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಅಂಬೇಡ್ಕರ್ ಸೇನೆಯ ರಾಜ್ಯಾಧ್ಯಕ್ಷ ಬಸವಟ್ಟಿಗೆ ನಾಗೇಂದ್ರ ಒತ್ತಾಯಿಸಿದ್ದಾರೆ.

