ನಂಜನಗೂಡು: ಕಳೆದ ವರ್ಷ ರಾಜ್ಯದಲ್ಲಿ ಕಂಡು ಬಂದ ಪ್ರವಾಹದ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ನಂಜನಗೂಡು ಮತ್ತು ವರುಣ ವಿಧಾನಸಭಾ ಕ್ಷೇತ್ರಗಳ ತಗ್ಗು ಪ್ರದೇಶಗಳಿಗೆ ಶಾಶ್ವತ ಪರಿಹಾರ ಕಲ್ಪಿಸಿಕೊಡುವ ಸಲುವಾಗಿ ಎಲ್ಲ ರೀತಿಯ ತಯಾರಿ ನಡೆಸಲಾಗಿದೆ.

ಈಗಾಗಲೇ ನಂಜನಗೂಡು ತಾಲ್ಲೂಕು ಆಡಳಿತದ ವತಿಯಿಂದ ಸುಸಜ್ಜಿತವಾದ ನಿವೇಶನಗಳನ್ನು ಗುರುತಿಸಲಾಗಿದೆ ಮೈಸೂರು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರದ ಮಟ್ಟದಲ್ಲಿ ಪತ್ರ ವ್ಯವಹಾರ ನಡೆಸಲಾಗಿದೆ. ಕಳೆದ ವರ್ಷ ತಗ್ಗು ಪ್ರದೇಶದ ನಿರಾಶ್ರಿತರಿಗೆ ಶಾಶ್ವತ ಪರಿಹಾರದ ಭರವಸೆ ನೀಡಿದೇವು ಅದರಂತೆ ನಡೆದುಕೊಳ್ಳುತ್ತೇವೆ ಎಂದು ನಂಜನಗೂಡಿನಲ್ಲಿ ಶಾಸಕ ದರ್ಶನ್ ಧ್ರುವನಾರಾಯಣ್ ಹೇಳಿದರು.

ನಂಜನಗೂಡು ನಗರದ ತಾಲ್ಲೂಕು ಪಂಚಾಯಿತಿಯ ಶಾಸಕರ ಕಛೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ಮೈಸೂರು ಭಾಗದಲ್ಲಿ ನಿರಂತರವಾಗಿ ಕಳೆದ ಒಂದು ವಾರಗಳಿಂದ ಜಿಟಿ ಜಿಟಿ ಮಳೆ ಸುರಿಯ ತೊಡಗುತ್ತಿದೆ. ತಹಶೀಲ್ದಾರ್ ಸೇರಿದಂತೆ ತಾಲ್ಲೂಕು ಮಟ್ಟದ ವಿವಿಧ ಅಧಿಕಾರಿಗಳಿಗೆ ಜಾಗೃತರಾಗಲು ತಿಳಿಸಲಾಗಿದೆ. ನಂಜನಗೂಡಿನ ಕಪಿಲಾ ನದಿಯಲ್ಲಿ ಯಾವುದೇ ಪ್ರವಾಹದ ಮುನ್ಸೂಚನೆ ಕಂಡು ಬಂದಿಲ್ಲ.

ಈಗಾಗಲೇ ಪ್ರವಾಹಕ್ಕೆ ಸಂಬಂಧಪಟ್ಟಂತೆ ತಾಲ್ಲೂಕು ಆಡಳಿತದ ವತಿಯಿಂದ ಎಲ್ಲಾ ರೀತಿಯ ಸಿದ್ಧತಾ ಕಾರ್ಯಗಳನ್ನು ಕೈಗೊಂಡಿದ್ದೇವೆ. ನಗರಸಭೆಯ ಅಧ್ಯಕ್ಷರು ಮತ್ತು ಆಯುಕ್ತರಿಂದ ನಗರ ಸಭಾ ವ್ಯಾಪ್ತಿಯಲ್ಲಿ ಈಗಾಗಲೇ ಸಭೆ ನಡೆಸಿ ತಗ್ಗು ಪ್ರದೇಶಗಳನ್ನು ವೀಕ್ಷಣೆ ಮಾಡಿ ಪಟ್ಟಿ ಮಾಡಲಾಗಿದೆ. ಹುಲ್ಲಹಳ್ಳಿ ಸೇರಿದಂತೆ ತಾಲೂಕಿನಾದ್ಯಂತ ತಗ್ಗು ಪ್ರದೇಶದ ವಾಸಿಗಳು ಭಯ ಪಡುವ ಅಗತ್ಯವಿಲ್ಲ. ನಿಮ್ಮ ಜೊತೆ ನಾವಿದ್ದೇವೆ ನಿಮ್ಮ ಸುರಕ್ಷತೆಗೆ ನಾವು ಬದ್ಧರಾಗಿದ್ದೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಜೆರಾಲ್ಡ್ ರಾಜೇಶ್, ಆಪ್ತ ಕಾರ್ಯದರ್ಶಿ ಮಹೇಶ್ ಸೇರಿದಂತೆ ಪಕ್ಷದ ಕಾರ್ಯಕರ್ತರು ಮುಖಂಡರು ಹಾಜರಿದ್ದರು.