ನಂಜನಗೂಡು: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಮಹಿಳೆಯರಿಗೆ ಪ್ರತಿ ತಿಂಗಳು ಸರಿಯಾಗಿ ವಿತರಣೆಯಾಗುತ್ತಿಲ್ಲ. ಕೇಂದ್ರದ ಮೋದಿ ಸರ್ಕಾರದಿಂದ ಮಹಿಳೆಯರಿಗೆ ಸಾಕಷ್ಟು ಯೋಜನೆಗಳಿವೆ. ಇವುಗಳನ್ನು ಮಹಿಳಾ ಮೋರ್ಚಾಗಳು ಸರಿಯಾದ ರೀತಿಯಲ್ಲಿ ತಲುಪಿಸಬೇಕು ಎಂದು ಮೈಸೂರು ಜಿಲ್ಲಾ ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಕುಂಬರಹಳ್ಳಿ ಸುಬ್ಬಣ್ಣ ತಿಳಿಸಿದರು.
ನಗರದ ಯಾತ್ರಿ ಭವನ ಕಲ್ಯಾಣ ಮಂಟಪದಲ್ಲಿ ಮೈಸೂರು ಜಿಲ್ಲಾ ಗ್ರಾಮಂತರ ವತಿಯಿಂದ ಜಿಲ್ಲಾ ಮಹಿಳಾ ಮೋರ್ಚಾ ವಿಶೇಷ ಸಭೆಯಲ್ಲಿ ಮಾತನಾಡಿದರು. ಕೇಂದ್ರ ಸರ್ಕಾರವು ಕೂಡ ಮಹಿಳೆಯರಿಗೆ 1 ಲಕ್ಷದಿಂದ 10 ಕೋಟಿಯವರೆಗೂ ಸಾಲ ಸೌಲಭ್ಯಗಳನ್ನು ನೀಡುತ್ತಿದೆ.
ಬಿಜೆಪಿ ಮಹಿಳಾ ಮೋರ್ಚಾ ಇಂತಹ ಯೋಜನೆಗಳ ಬಗ್ಗೆ ಮಹಿಳೆಯರಿಗೆ ತಲುಪಿಸಬೇಕು. ಕರ್ನಾಟಕದಲ್ಲಿ ಲಕ್ಷಾಂತರ ಸ್ತ್ರೀ ಶಕ್ತಿ ಸಂಘಗಳು ಸ್ಥಾಪನೆಗೊಂಡಿವೆ. ಇಂತಹ ಸಂಘಗಳಿಗೆ ಕೇಂದ್ರ ಸರ್ಕಾರದಿಂದ ಸಾಲ ಸೌಲಭ್ಯ ಸಿಗುತ್ತಿದೆ. ಬೂತ್ ಮಟ್ಟದಿಂದ ಸಂಘಟನೆ ಮಾಡಿ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರ ಹಿಡಿಯುವಂತೆ ಶ್ರಮವಹಿಸಬೇಕು ಎಂದರು.
ಬಳಿಕ ಮಾಜಿ ಶಾಸಕ ಹರ್ಷವರ್ಧನ್ ಮಾತನಾಡಿ, ದೇಶದಲ್ಲಿ ಮಹಿಳೆಯರಿಗೆ 33 ಪ್ರತಿಶತ ಮೀಸಲಾತಿ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಬಿಜೆಪಿ ಸರ್ಕಾರ ಈ ಬಗ್ಗೆ ದಿಟ್ಟ ನಿರ್ಧಾರ ತೆಗೆದುಕೊಳ್ಳುತ್ತದೆ. 525 ಇರುವ ಸ್ಥಾನವನ್ನು 800 ಕ್ಕೆ ಏರುತ್ತದೆ. ಬಿಹಾರ್ ಸರ್ಕಾರ ಇಡೀ ದೇಶದಲ್ಲಿ ಮೊದಲ ಬಾರಿಗೆ 50 ಪ್ರತಿಶತ ಮೀಸಲಾತಿ ನೀಡಿದ್ದಾರೆ. ಇವತ್ತು ಕೂಡ ದೇಶದಲ್ಲಿ ಅಸ್ಪೃಶ್ಯತೆ ಮತ್ತು ಅಸಮಾನತೆ ನಡೆಯುತ್ತಿದೆ. ಇದಕ್ಕೂ ಕೂಡ ಕಠಿಣ ಕಾನೂನು ಜಾರಿಗೆ ತರಬೇಕು.
ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆ ತಂದಿದೆ. ಆದರೆ ಪ್ರತಿ ತಿಂಗಳು ಹಣ ಹಾಕುವ ಬದಲು ನಾಲ್ಕು ತಿಂಗಳಿಗೊಮ್ಮೆ ನೀಡುತ್ತಿದ್ದಾರೆ. ಇದು ಕೂಡ ಆತಂಕ ತರುವ ವಿಚಾರ. ಮಹಿಳೆಯರನ್ನ ಆರ್ಥಿಕವಾಗಿ ಸಬಲೀಕರಣ ಮಾಡಬೇಕಾಗಿದೆ. ಬಿಜೆಪಿ ಸರ್ಕಾರವು ಕೂಡ ಮಹಿಳೆಯರಿಗೆ ಇನ್ನೂ ಹೆಚ್ಚಿನ ಕಾರ್ಯಕ್ರಮವನ್ನು ತರಬೇಕಾಗಿದೆ. ಮಹಿಳೆಯರ ಗ್ಯಾರಂಟಿ ಯೋಜನೆಗಳಿಂದ ಗಂಡಸರು ಬೇಜಾರು ಮಾಡಿಕೊಂಡಿದ್ದಾರೆ ಎಂದು ನಗೆ ಚಟಾಕಿ ಆರಿಸಿದರು.
ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷರಾದ ನಳಿನಿ ಗೌಡ, ಜಿಲ್ಲಾಧ್ಯಕ್ಷರಾದ ಕುಂಬರಹಳ್ಳಿ ಸುಬ್ಬಣ್ಣ, ಮಾಜಿ ಶಾಸಕರಾದ ಹರ್ಷವರ್ಧನ್, ರಾಜ್ಯ ಮಹಿಳಾ ಮೋರ್ಚಾ ಉಪಾಧ್ಯಕ್ಷರಾದ ಡಾ. ಪ್ರಪುಲಾ ಮಲ್ಲಾಡಿ, ಮಂಗಳ ಸೋಮಶೇಖರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ, ಮಹೇಶ್ ಹೊರಳವಾಡಿ, ಕಿರಣ್, ಜೈರಾಮೇಗೌಡ ಬಿಜೆಪಿ ನಂಜನಗೂಡು ನಗರ ಅಧ್ಯಕ್ಷ ಸಿದ್ದರಾಜು, ಗ್ರಾಮಂತರ ಮಂಡಲ ಅಧ್ಯಕ್ಷರಾದ ಕೆಂಡಗಣ್ಣಪ್ಪ, ನಂದಿನಿ ಮಹೇಶ್ ಸೇರಿದಂತೆ ಮತ್ತಿತರರು ಹಾಜರಿದ್ದರು.

