ನಂಜನಗೂಡು: ಪಟ್ಟಣದ ಶ್ರೀ ವೀರಾಂಜನೇಯ ಧರ್ಮ ಜಾಗೃತಿ ಬಳಗದಿಂದ ಶನಿವಾರ ಶ್ರೀ ಹನುಮ ಜಯಂತಿ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಮತ್ತು ಶ್ರದ್ಧಾ ಭಕ್ತಿಯೊಂದಿಗೆ ಆಚರಿಸಲಾಯಿತು.

ಹನುಮ ಜಯಂತಿ ಅಂಗವಾಗಿ ಮುಂಜಾನೆಯಿಂದಲೇ ಹನುಮನ ಉತ್ಸವ ಮೂರ್ತಿಗೆ ವಿಶೇಷವಾಗಿ ಪೂಜೆ ಪುನಸ್ಕಾರ , ಹೋಮ-ಹವನ ಮಾಡಲಾಯಿತು. ನಂತರ ವಿವಿಧ ಹೂಗಳಿಂದ ಅಲಂಕರಿಸಿದ ಪಲ್ಲಕ್ಕಿಯ ಮೇಲೆ ಪ್ರತಿಷ್ಠಾಪಿಸಲಾಯಿತು.

ಶ್ರೀ ನಂಜುಂಡೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಶಾಸಕ ದರ್ಶನ ಧ್ರುವನಾರಾಯಣ್, ಮಲ್ಲನ ಮೂಲೆ ಮಠದ ಕಿರಿಯ ಶ್ರೀಗಳಾದ ಶ್ರೀ ಇಮ್ಮಡಿ ಸಿದ್ದಲಿಂಗ ಸ್ವಾಮಿಗಳು ಹಾಗೂ ಹಿಂದೂ ಹೋರಾಟಗಾರ ಅರುಣ್ ಶಾಮ್ ಜಿ ಶ್ರೀ ಆಂಜನೇಯನ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಶುಭಯಾತ್ರೆಗೆ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಬೃಹತ್ ಗಾತ್ರದ ಶ್ರೀರಾಮನ ಮೂರ್ತಿ ಸೇರಿದಂತೆ ಗಾಡಿ ಗೊಂಬೆ, ವೀರಗಾಸೆ, ಕಂಸಾಳೆ, ಪೂಜಾ ಕುಣಿತ, ಡೊಳ್ಳು ಕುಣಿತ, ಆಪರೇಷನ್ ಸಿಂಧೂರ ಸ್ಥಬ್ಧ ಚಿತ್ರ ಸೇರಿದಂತೆ 11ಕ್ಕೂ ಹೆಚ್ಚು ಕಲಾತಂಡಗಳು ಭಾಗವಹಿಸಿದ್ದವು.

ಮೆರವಣಿಗೆಯಲ್ಲಿ ಸಾವಿರಾರು ಭಕ್ತರು ಭಾಗವಹಿಸಿ, ಮೆರವಣಿಗೆ ಉದ್ದಕ್ಕೂ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಎಂಬ ಘೋಷವು ಮೊಳಗಿತು. ನಗರದ ರಾಷ್ಟ್ರಪತಿ ರಸ್ತೆಯ ಮೂಲಕ ಚಿಂತಾಮಣಿ ಗಣಪತಿ ದೇವಸ್ಥಾನ ದಿಂದ ಹುಲ್ಲಹಳ್ಳಿ ವೃತ್ತದ ಮೂಲಕ ಮಹಾತ್ಮ ಗಾಂಧಿ ರಸ್ತೆಯ ಮೂಲಕ ಹೊರಟು ಶ್ರೀ ನಂಜುಂಡೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಕೊನೆಗೊಂಡಿತು. ನೂರಾರು ಸಂಖ್ಯೆಯಲ್ಲಿ ಯುವಕರು ಕೇಸರಿ ಧ್ವಜ ಹಿಡಿದು ಶ್ರೀ ಆಂಜನೇಯ ಎಂಬ ಘೋಷಣೆಗಳನ್ನು ಕೂಗುತ್ತಿರುವ ದೃಶ್ಯ ಕಂಡು ಬಂದಿತ್ತು.

ನಗರಸಭಾ ಸದಸ್ಯ ಮಹಮ್ಮದ್ ಖಾಲಿದ್ ಅವರ ನೇತೃತ್ವದಲ್ಲಿ. ಮೆರವಣಿಗೆಯಲ್ಲಿ ಸಾಗುವ ಭಕ್ತಾದಿಗಳಿಗೆ ನೀರು ಮಜ್ಜಿಗೆ, ಪಾನಕ, ಮೊಸರನ್ನ ಸೇರಿದಂತೆ ತಿಂಡಿ ತಿನಿಸುಗಳನ್ನ ವಿತರಿಸಿದರು. ಇದೆ ಮೊದಲ ಬಾರಿಗೆ ಪಾಕಿಸ್ತಾನ ಮೇಲೆ ನಡೆಸಿದ ಆಪರೇಷನ್ ಸಿಂಧೂರ ಸ್ಥಬ್ಧ ಚಿತ್ರವು ಮೆರವಣಿಗೆಯಲ್ಲಿ ಎಲ್ಲರ ಗಮನ ಸೆಳೆಯಿತು.

ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ರವರ ನೇತೃತ್ವದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ 850 ಪೊಲೀಸ್ ಪೇದೆಗಳು, 7 ಡಿವೈಎಸ್ಪಿ, 46 ಪಿಎಸ್ಐ, 20 ಸಬ್ ಇನ್ಸ್ಪೆಕ್ಟರ್‌ಗಳನ್ನು ನಿಯೋಜನೆ ಮಾಡಲಾಗಿತ್ತು.