ಮೈಸೂರು: ಜಿಲ್ಲೆಯ ಸಾಲಿಗ್ರಾಮ ತಾಲ್ಲೂಕಿನ ಚುಂಚನಕಟ್ಟೆಯ ಕಾವೇರಿ ನದಿ ದಡದ ರಾಮದೇವರ ತೆಪ್ಪೋತ್ಸವ ವಿಜೃಂಭಣೆಯಿಂದ ನಡೆದಿದ್ದು, ಈ ಕ್ಷಣಗಳನ್ನು ಸಹಸ್ರಾರು ಭಕ್ತರು ಕಣ್ತುಂಬಿಕೊಂಡರು.

ಶ್ರೀ ರಾಮದೇವರ ದೇವಾಲಯದಿಂದ ಶ್ರೀ ರಾಮ, ಲಕ್ಷಣ, ಸೀತಾಮಾತೆ ದೇವರುಗಳ ಉತ್ಸವ ಮೂರ್ತಿಗಳನ್ನು ಪಟಾಕಿ ಸಿಡಿಸುವ ಮೂಲಕ ಅದ್ಧೂರಿ ಮೆರವಣಿಗೆ ಮೂಲಕ ಕಾವೇರಿ ನದಿಯ ದಡದಲ್ಲಿ ದೇವಾಲಯದ ಸಮೀಪವಿರುವ ಆಂಜನೇಯ ಗುಡಿಯ ಬಳಿ ತಂದು ಅಲಂಕೃತ ತೆಪ್ಪದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು.

ಆ ನಂತರ ತೆಪ್ಪದಲ್ಲಿ ದೇವರ ಉತ್ಸವ ಮೂರ್ತಿಗಳನ್ನು ರಾತ್ರಿ 8.15ರ ಸಮಯದಲ್ಲಿ ಕಾವೇರಿ ನದಿಯ ಮಧ್ಯ ಭಾಗಕ್ಕೆ ತೆಗೆದುಕೊಂಡು ಹೋಗಿ 3 ಬಾರಿ ಸುತ್ತು ಹಾಕಿಸುತ್ತಿದ್ದಂತೆಯೇ ತೆಪ್ಪದಲ್ಲಿದ್ದ ಅರ್ಚಕ ವಾಸುದೇವನ್ ಉತ್ಸವ ಮೂರ್ತಿಗಳಿಗೆ ಮಂಗಳಾರತಿಯನ್ನು ಮಾಡಿದಾಗ ನೆರೆದಿದ್ದ ಸಾವಿರಾರು ಭಕ್ತಾಧಿಗಳು ಶ್ರೀ ರಾಮನಿಗೆ ಜೈಕಾರ, ಶ್ರೀರಮಣನ ಗೋವಿಂದಾ ಗೋ..ವಿಂದಾ ಎಂಬ ಘೋಷಣೆಗಳನ್ನು ಮೊಳಗಿಸಿದರು.

ಕಾವೇರಿ ನದಿಯಲ್ಲಿ ಸುತ್ತಿ ಬಂದ ಶ್ರೀರಾಮ, ಲಕ್ಷಣ, ಸೀತಾ ದೇವರುಗಳ ಉತ್ಸವ ಮೂರ್ತಿಗಳನ್ನು ಭಕ್ತಾಧಿಗಳು ಚಪ್ಪಾಳೆ ತಟ್ಟುವ ಮೂಲಕ ಸ್ವಾಗತಿಸಿ ಪೂಜಾ ಕೈಂಕರ್ಯಗಳನ್ನು ಕೈಗೊಂಡು ತಮ್ಮ ಇಷ್ಟಾರ್ಥವನ್ನು ಈಡೇರುವಂತೆ ಪ್ರಾರ್ಥಿಸಿಕೊಂಡರು. ತದನಂತರ ಉತ್ಸವ ಮೂರ್ತಿಗಳನ್ನು ಮತ್ತೆ ದೇವಾಲಯಕ್ಕೆ ಹೊತ್ತು ತರಲಾಯಿತು.

ಈವೇಳೆ ಸಾಲಿಗ್ರಾಮ ತಹಸೀಲ್ದಾರ್ ನರಗುಂದ, ಉಪತಹಸೀಲ್ದಾರ್ ಕೆ.ಜೆ.ಶರತ್, ಗ್ರಾಮ ಲೆಕ್ಕಿಗರಾದ ಮೇಘ, ಮೌನೇಶ್, ಕಾವೇರಿ, ಪ್ರಿಯಾ, ದೇವಾಲಯದ ಇಓ ಕೆ.ರಘು, ಪಾರುಪತ್ತೆದಾರ್ ಯತೀರಾಜ್, ಸೇರಿದಂತೆ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.