ನಂಜನಗೂಡು: ನಂಜನಗೂಡು ತಾಲ್ಲೂಕಿನ ಬಂಚಳ್ಳಿಹುಂಡಿ ಗ್ರಾಮದಲ್ಲಿರುವ ಗ್ರಾಮಾಕ್ಸ್ ಪೇಪರ್ ಅಂಡ್ ಬೋರ್ಡ್ಸ್ ಲಿಮಿಟೆಡ್ ಕಾರ್ಖಾನೆ ಮುಚ್ಚಿರುವುದನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ನಂಜನಗೂಡಿನಲ್ಲಿ ಕಾರ್ಮಿಕರು ಪ್ರತಿಭಟನೆ ನಡೆಸಿದರು.

ಕಾನೂನು ಬಾಹಿರವಾಗಿ ಕಾರ್ಖಾನೆ ಮುಚ್ಚಲಾಗಿದೆ, ಕಾರ್ಖಾನೆ ಪುನರ್‌ ಆರಂಭಿಸುವಂತೆ ಒತ್ತಾಯಿಸಿ ಗ್ರಾಮಾಕ್ಸ್‌ ಪೇಪರ್‌ ಆಂಡ್‌ ಬೋರ್ಡ್ಸ್‌ ಲಿಮಿಟೆಡ್‌ನ ನೂರಾರು ಕಾರ್ಮಿಕರು ಬೃಹತ್‌ ಪ್ರತಿಭಟನಾ ಜಾಥಾ ನಡೆಸಿದರು.

ಪಟ್ಟಣದ ನಗರಸಭೆ ಮುಂಭಾಗದ ನೆಹರು ವೃತ್ತದ ಬಳಿ ಜಮಾಯಿಸಿದ್ದ ಕಾರ್ಖಾನೆ ನೌಕರರು, ಕಾರ್ಖಾನೆ ಆಡಳಿತ ಮಂಡಳಿ ವಿರುದ್ದ ವಿವಿಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು . ನಂಜನಗೂಡಿನ ತಾಂಡವಪುರ ಕೈಗಾರಿಕಾ ವಲಯದ ಬಂಚಳ್ಳಿ ಹುಂಡಿ ಗ್ರಾಮದಲ್ಲಿ ಕಾರ್ಖಾನೆ ಇದ್ದು, ಕಳೆದ ೨೦ ವರ್ಷದಿಂದ ಉತ್ತಮವಾಗಿ ಲಾಭಗಳಿಸುತ್ತಾ ಬಂದಿದೆ. ಆದರೆ ಕಾರ್ಖಾನೆ ಹೊರ ಗುತ್ತಿಗೆ ನೌಕರರ ಸಂಖ್ಯೆ ಹೆಚ್ಚಿಸುವ ಉದ್ದೇಶದಿಂದ ೧೨೦ಕ್ಕೂ ಅಧಿಕ ಖಾಯಂ ನೌಕರರನ್ನು ಸೇವೆಯಿಂದ ವಜಾಗೊಳಿಸಿ, ಉದ್ದೇಶಪೂರ್ವಕವಾಗಿ ಕಾರ್ಖಾನೆ ಮುಚ್ಚಲಾಗಿದೆ.

ಇದು ಖಂಡನೀಯ. ಮುಚ್ಚಿರುವ ಕಾರ್ಖಾನೆಯನ್ನು ತೆರೆದು ಪುನರಾರಂಭ ಮಾಡಬೇಕು ಎಂದು ಆರ್‌ಪಿ ರಸ್ತೆ ಮಾರ್ಗವಾಗಿ ತಾಲ್ಲೂಕು ಕಚೇರಿವರೆಗೂ ಕಾಲ್ನಡಿಗೆ ಮೂಲಕ ಸಾಗಿ, ಪ್ರತಿಭಟನೆ ನಡೆಸಿ ತಹಶೀಲ್ದಾರ್ ರವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಎಐಯುಟಿಯುಸಿ ಜಂಟಿ ಕಾರ್ಯದರ್ಶಿ ಮುದ್ದುಕೃಷ್ಣ, ಎಐಯುಟಿಯುಸಿ ಸದಸ್ಯರಾದ ಆಕಾಶ್‌ ಕುಮಾರ್‌, ಕಾರ್ಖಾನೆ ಎಂಪ್ಲಾಯಿಸ್‌ ಯೂನಿಯನ್‌ ಪದಾಧಿಕಾರಿಗಳಾದ ಬಿ. ಮಹದೇವಸ್ವಾಮಿ, ಎನ್‌. ಬಸವರಾಜ್‌ ನಾಯಕ್‌, ಗಂಗಾಧರ್‌, ನಾಗೇಂದ್ರ, ಶಿವಣ್ಣ, ಕಾರ್ಯಕಾರಿ ಸಮಿತಿ ಸದಸ್ಯರಾದ ಶಿವರಾಮು, ವಿಜಯ್‌ ಕುಮಾರ್‌, ಸುರೇಶ್‌, ಸಂತೋಷ್‌, ಅಭಿಲಾಷ್‌, ರವಿಕುಮಾರ್‌, ಲೋಕೇಶ್‌, ನಿಂಗರಾಜು, ಸಿದ್ದರಾಜು, ಗೋಪಾಲ ಸೇರಿದಂತೆ ನೂರಾರು ಸಂಖ್ಯೆಯ ನೌಕರರು ಭಾಗವಹಿಸಿದ್ದರು.