ನಂಜನಗೂಡು: ಜಮೀನಿನ ವಿಚಾರದಲ್ಲಿ ಬೆದರಿಕೆ ಮತ್ತು ಅಪಮಾನಕ್ಕೆ ಬೇಸತ್ತ ಗ್ರಾಮ ಪಂಚಾಯ್ತಿ ಸದಸ್ಯ ಆತ್ಮಹತ್ಯೆಗೆ ಶೃಣಾಗಿರುವ ಘಟನೆ ನಂಜನಗೂಡು ತಾಲ್ಲೂಕಿನ ಅಡಕನಹಳ್ಳಿಹುಂಡಿ ಗ್ರಾಮದಲ್ಲಿ ನಡೆದಿದೆ.
ಮಾದಪ್ಪ (70) ಆತ್ಮಹತ್ಯೆಗೆ ಶರಣಾದ ಗ್ರಾಮ ಪಂಚಾಯ್ತಿ ಸದಸ್ಯನಾಗಿದ್ದು, ಈತನ ಸಾವಿಗೆ ಜಮೀನು ವಿಚಾರವಾಗಿ ವಿರೋಧಿಗಳ ಬೆದರಿಕೆ, ಮಾನಸಿಕ ಕಿರುಕುಳ, ಅಪಮಾನ ಮತ್ತು ನಿಂದನೆಗಳೆ ಕಾರಣ ಅನ್ನೋ ಗಂಭಿರ ಆರೋಪ ಕೇಳಿ ಬಂದಿದೆ.
ತನ್ನ ಮೂವರು ಹೆಣ್ಣು ಮಕ್ಕಳನ್ನು ಮದುವೆ ಮಾಡಿ, ಹೆಂಡ್ತಿ ಜೊತೆ ವಾಸವಿದ್ದ ಅಡಕನಹಳ್ಳಿ ಹುಂಡಿಯಲ್ಲಿರುವ ತನ್ನ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ವಿಷಯ ತಿಳಿದು ಸ್ಥಳಕ್ಕೆ ಡಿವೈಎಸ್ಪಿ ರಘು, ಆರಕ್ಷಕ ನಿರೀಕ್ಷಕ ಸುನೀಲ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನೇಣು ಬಿಗಿದ ಸ್ಥಿತಿಯಲ್ಲಿ ನೇತಾಡುತ್ತಿದ್ದ ಮೃತ ವ್ಯಕ್ತಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ನನ್ನ ಗಂಡನ ಸಾವಿಗೆ ಕಾರಣರಾದವರ ವಿರುದ್ದ ದೂರು ದಾಖಲಿಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಂಡು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನೊಂದ ಕುಟುಂಬಸ್ಥರು ಅಂಗಲಾಚಿದ್ದಾರೆ.

