ಮೈಸೂರು: ರೋಟರಿ ಕ್ಲಬ್ ಆಫ್ ಬನ್ನೂರಿನ 2026–27ನೇ ಸಾಲಿನ ನೂತನ ಪದಾಧಿಕಾರಿಗಳ ಪದವಿ ಪ್ರಧಾನ ಸಮಾರಂಭವು ಚಾಮನಹಳ್ಳಿಯ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ವಿಜೃಂಭಣೆಯಿಂದ ನಡೆಯಿತು.

ಕಾರ್ಯಕ್ರಮದಲ್ಲಿ ಸಮಾಜ ಸೇವಕರೂ, ರೋಟರಿ ಕ್ಲಬ್‌ನ ಪರಿಸರ ಜಾಗೃತಿ ಹಾಗೂ ಪಬ್ಲಿಕ್ ಇಮೇಜ್ ಚೇರ್ಮನ್ ಹಾಗೂ ಪರಿಸರ ಜಾಗೃತಿ ವೇದಿಕೆಯ ಅಧ್ಯಕ್ಷರೂ ಆದ ಡಾ. ಮಹೇಂದ್ರ ಸಿಂಗ್ ಕಾಳಪ್ಪ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಬೆಂಡರವಾಡಿ ಸರ್ಕಾರಿ ಶಾಲೆಯ 86 ವಿದ್ಯಾರ್ಥಿಗಳಿಗೆ ವರ್ಷಪೂರ್ತಿ ಉಪಯೋಗವಾಗುವ ನೋಟ್‌ಬುಕ್‌ಗಳನ್ನು ವಿತರಿಸಿ, ಮಾತನಾಡಿದ ಡಾ. ಮಹೇಂದ್ರ ಸಿಂಗ್ ಕಾಳಪ್ಪ ಅವರು, ಗ್ರಾಮೀಣ ಭಾಗದ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಕ್ಕಳಿಗೆ ಶಿಕ್ಷಣ ಮುಂದುವರಿಸುವುದು ಹಲವು ಸವಾಲುಗಳ ನಡುವೆ ನಡೆಯುತ್ತಿದೆ.

ಕೇವಲ ಆರ್ಥಿಕ ಕೊರತೆಯಿಂದ ಯಾವುದೇ ಮಗು ಶಿಕ್ಷಣದಿಂದ ವಂಚಿತವಾಗಬಾರದು ಎಂಬ ಉದ್ದೇಶದಿಂದ ಈ ನೋಟ್‌ಬುಕ್ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇನೆ. ಮುಂದಿನ ದಿನಗಳಲ್ಲಿಯೂ ರೋಟರಿ ಕ್ಲಬ್ ಹಾಗೂ ಪರಿಸರ ಜಾಗೃತಿ ವೇದಿಕೆಯ ಮೂಲಕ ಶಿಕ್ಷಣ, ಪರಿಸರ ಹಾಗೂ ಸಮಾಜಮುಖಿ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸಲಾಗುವುದು ಎಂದು ತಿಳಿಸಿದರು.

ಇದಕ್ಕೂ ಮುನ್ನ, ಮಾಜಿ ರೋಟರಿ ಜಿಲ್ಲಾ ಗವರ್ನರ್ ಹಾಗೂ ಮೇಜರ್ ಡೋನರ್ ರೋ. ಎ.ಆರ್. ರವೀಂದ್ರ ಭಟ್ ಅವರು 2026–27ನೇ ಸಾಲಿನ ನೂತನ ಅಧ್ಯಕ್ಷ ರೋ. ಜಿ.ಪಿ. ಪ್ರಸನ್ನ ಹಾಗೂ ಅವರ ನೂತನ ತಂಡಕ್ಕೆ ಪದವಿ ಪ್ರಧಾನ ನೆರವೇರಿಸಿ ಶುಭ ಹಾರೈಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬೆಂಗಳೂರಿನ ಉಚ್ಚ ನ್ಯಾಯಾಲಯದ ಮಾಜಿ ನ್ಯಾಯಮೂರ್ತಿಗಳು ಹಾಗೂ ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಟಿ.ಜಿ. ಶಿವಶಂಕರೇಗೌಡ ಅವರು ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಣ, ಆರೋಗ್ಯ ಹಾಗೂ ಸಮಾಜಸೇವಾ ಕ್ಷೇತ್ರಗಳಲ್ಲಿ ರೋಟರಿ ಸಂಸ್ಥೆ ಸಲ್ಲಿಸುತ್ತಿರುವ ಸೇವೆ ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು.

ನೂತನ ಅಧ್ಯಕ್ಷ ರೋ. ಜಿ.ಪಿ. ಪ್ರಸನ್ನ ಅವರು ಮಾತನಾಡಿ, ತಮ್ಮ ಅವಧಿಯಲ್ಲಿ ಶಿಕ್ಷಣ, ಆರೋಗ್ಯ, ಪರಿಸರ ಸಂರಕ್ಷಣೆ ಮತ್ತು ಸಮಾಜಮುಖಿ ಸೇವಾ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ಹೇಳಿದರು.

ವೇದಿಕೆಯಲ್ಲಿ ನೂತನ ಕಾರ್ಯದರ್ಶಿ ರೋ. ಬಿ.ಸಿ. ಮುರಳಿಗೋಪಾಲ್, ವಲಯ–09ಎ ಸಹಾಯಕ ಗವರ್ನರ್ ರೋ. ವೈ.ಎಚ್. ಹನುಮಂತೇಗೌಡ, ವಲಯ ಸೇನಾನಿ ರೋ. ಎಚ್. ನಂದೀಶ್, ನಿರ್ಗಮಿತ ಅಧ್ಯಕ್ಷ ರೋ. ರಾಜೀವ್, ನಿರ್ಗಮಿತ ಕಾರ್ಯದರ್ಶಿ ರೋ. ರಾಜೇಶ್‌ಗೌಡ ಟಿ.ಸಿ. ಸೇರಿದಂತೆ ರೋಟರಿ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ರೋಟರಿ ಸದಸ್ಯರು, ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.