ನಂಜನಗೂಡು: ರಾಜ್ಯಾದ್ಯಂತ ಇಂದು ಸರ್ಕಾರಿ ಶಾಲಾ ಪ್ರಾರಂಭೋತ್ಸವ ಮಾಡಲಾಗಿದ್ದು, ಶಾಲಾ ಪ್ರಾರಂಭೋತ್ಸವ ದಿನವೇ ಸರ್ಕಾರಿ ಶಾಲಾ ಕಟ್ಟಡಗಳು ಸೋರುತ್ತಿವೆ. ನಂಜನಗೂಡು ತಾಲ್ಲೂಕಿನ ಚಿಕ್ಕಕವಲಂದೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಲವತ್ತಕ್ಕೂ ಹೆಚ್ಚು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಮೂರು ಕೊಠಡಿಗಳು ಮಳೆ ಬಂದರೆ ಸೋರುತ್ತದೆ. ಕಟ್ಟಡದ ಒಳಗೆ ನೀರು ತುಂಬಿಕೊಳ್ಳುತ್ತದೆ. ಕಿಟಕಿಗಳು ಮತ್ತು ಬಾಗಿಲು ಮುರಿದಿದ್ದು, ಹೆಂಚುಗಳು ಹೊಡೆದು ಕಟ್ಟಡದ ಗೋಡೆಗಳು ಬಿರುಕು ಬಿಟ್ಟಿವೆ. ಇದರಿಂದ ಜೀವ ಭಯದಲ್ಲೇ ಮಕ್ಕಳು ಪಾಠ ಪ್ರವಚನ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಕಿಡಿಕಾರಿದ್ದಾರೆ. ಕೂಡಲೇ ಕಟ್ಟಡವನ್ನು ದುರಸ್ತಿಪಡಿಸಬೇಕು ಹೊಸ ಕಟ್ಟಡವನ್ನು ನಿರ್ಮಾಣ ಮಾಡಿಕೊಡಬೇಕು. ಇಲ್ಲವಾದಲ್ಲಿ ನಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.