ನಂಜನಗೂಡು: ಸರ್ಕಾರಿ ಶಾಲೆಯ ಮಕ್ಕಳ ಜೀವದ ಜೊತೆ ಶಾಲಾ ಶಿಕ್ಷಕರು ಚೆಲ್ಲಾಟವಾಡುತ್ತಿದ್ದಾರೆ. ನಂಜನಗೂಡು ತಾಲ್ಲೂಕಿನ ವರುಣಾ ವಿಧಾನಸಭಾ ಕ್ಷೇತ್ರದ ಬಿಳಿಗೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂತಹ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಶಾಲೆಯ ಸಂಪ್ ನಿಂದ ಪುಟ್ಟ ಮಕ್ಕಳು ಬಿಂದಿಗೆಯಿಂದ ನೀರನ್ನ ಹೊರತೆಗೆದು ಬಳಕೆ ಮಾಡುತ್ತಿದ್ದಾರೆ. ಶಾಲೆಯ ಸಿಬ್ಬಂದಿಗಳು ಮಾಡಬೇಕಾದ ಇಂತಹ ಕೆಲಸಗಳನ್ನು ಮಕ್ಕಳ ಕೈಲಿ ಮಾಡಿಸುತ್ತಿದ್ದಾರೆ. ಸುಮಾರು 10 ಅಡಿ ಆಳವಿರುವ ಸಂಪ್ ನಿಂದ ಮಕ್ಕಳು ಬಿಂದಿಗೆಯಲ್ಲಿ ನೀರು ತೆಗೆಯುತ್ತಿದ್ದಾರೆ.

ಆಯತಪ್ಪಿದರೂ ಅನಾಹುತ ಗ್ಯಾರೆಂಟಿ. ಈ ಶಾಲೆಯಲ್ಲಿ 90 ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಆದ್ರೆ ಇಲ್ಲಿ ಇಂತಹ ಕೆಲಸಗಳ ನಿರ್ವಹಣೆಗೆ ಕೆಲಸಗಾರರನ್ನ ನಿಯೋಜಿಸಿಲ್ಲ. ಹೀಗಾಗಿ ಮಕ್ಕಳಿಂದಲೇ ಕೆಲಸ ಮಾಡಿಸುತ್ತಿದ್ದಾರೆ. ಈ ಬಗ್ಗೆ ಯಾರೂ ಸಹ ತಲೆ ಕೆಡಿಸಿಕೊಳ್ಳುತ್ತಿಲ್ಲ.
ಮುಖ್ಯಶಿಕ್ಷಕಿ ಸೇರಿದಂತೆ 5 ಮಂದಿ ಇಲ್ಲಿ ಶಿಕ್ಷಕಿಯರಿದ್ದಾರೆ. ಸಿಎಂ ಪ್ರತಿನಿಧಿಸುತ್ತಿರುವ ಕ್ಷೇತ್ರದಲ್ಲೇ ಇಂತಹ ಘಟನೆಗಳು ನಡೆಯುತ್ತಿದ್ದರೂ ಶಿಕ್ಷಣ ಇಲಾಖೆ ಜಾಣಕುರುಡುತನ ಪ್ರದರ್ಶಿಸುತ್ತಿದೆ.

ಕೂಡಲೇ ಅಧಿಕಾರಿಗಳು ಇತ್ತ ಗಮನ ಹರಿಸಿ ಮಕ್ಕಳ ರಕ್ಷಣೆಗೆ ಮುಂದಾಗಬೇಕಿದೆ. ಇದಕ್ಕೆ ಕಾರಣರಾದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಅನಾಹುತ ಸಂಭವಿಸುವ ಮುನ್ನ ಶಿಕ್ಷಣ ಇಲಾಖೆ ಎಚ್ಚೆತ್ತುಕೊಳ್ಳುವುದೇ ಕಾದು ನೋಡಬೇಕಿದೆ.

