ನಂಜನಗೂಡು: ಅಸ್ಪೃಶ್ಯತೆ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿದ್ದರೆ ಅಧಿಕಾರಿಗಳು ಇದ್ಯಾವುದರ ಪರಿವೆ ಇಲ್ಲವೆಂಬಂತೆ ತಮ್ಮ ಮೊಬೈಲ್ ನಲ್ಲಿ ತಲ್ಲೀನರಾದ ಪ್ರಕರಣ ಬೆಳಕಿಗೆ ಬಂದಿದೆ.

ನಂಜನಗೂಡು ನಗರದ ತಾಲ್ಲೂಕು ಆಡಳಿತ ಭವನದ ಸಭಾಂಗಣದಲ್ಲಿ ನಡೆದ ಎಸ್ಸಿ ಎಸ್ಟಿ ಸಭೆಯಲ್ಲಿ ಅಧಿಕಾರಿಗಳ ವರ್ತನೆಗೆ ಸಾರ್ವಜನಿಕರಿಂದ ಟೀಕೆಗೆ ಗುರಿಯಾಗಿದೆ. ಎಸ್ಸಿ ಎಸ್ಟಿ ಸಮಸ್ಯೆಗಳ ಬಗ್ಗೆ ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ನೇತೃತ್ವದಲ್ಲಿ ನಡೆದ ಸಭೆಯಲ್ಲೇ ಅಧಿಕಾರಿಗಳು ಮೊಬೈಲ್ ನಲ್ಲಿ ಫುಲ್ ಬ್ಯುಸಿ ಆಗಿರುವುದು ಕಂಡು ಬಂದಿದೆ.

ಸರ್ಕಾರಿ ಶಾಲೆ ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಅಸ್ಪೃಶ್ಯತೆ ಆಚರಿಸುತ್ತಿರುವ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿತ್ತು. ಇಂತಹ ಪಿಡುಗಿಗೆ ನಿಯಂತ್ರಣ ಹೇರಬೇಕೆಂದು ಎಸ್ಸಿ ಎಸ್ಟಿ ಸಮಿತಿ ಸದಸ್ಯ ಕಾರ್ಯ ಬಸವಣ್ಣ ಸಭೆಯಲ್ಲಿ ಅಧಿಕಾರಿಗಳಿಗೆ ಮನ ಮುಟ್ಟುವಂತೆ ಹೇಳುತ್ತಿದ್ದರು.

ಆದ್ರೆ ಅಧಿಕಾರಿಗಳು ಇದ್ಯಾವುದೂ ನಮಗೆ ಸಂಬಂಧವೇ ಇಲ್ಲವೇನೋ ಎಂಬಂತೆ ವರ್ತಿಸುತ್ತಾ ಮೊಬೈಲ್ ಗಳನ್ನ ಬಳಕೆ ಮಾಡುತ್ತಾ ಕಾಲ ಕಳೆದಿದ್ದಾರೆ. ಸಭೆಯಲ್ಲಿ ಹಾಜರಾದ ಬಹುತೇಕ ಮಂದಿ ಮೊಬೈಲ್ ಬಳಕೆಯಲ್ಲೇ ಮುಳುಗಿದ್ದಾರೆ. ಇಂತಹ ಅಧಿಕಾರಿಗಳ ವಿರುದ್ದ ತಹಶೀಲ್ದಾರ್ ಕ್ರಮಕ್ಕೆ ಮುಂದಾಗುತ್ತಾರಾ ಕಾದು ನೋಡಬೇಕಿದೆ.