ನಂಜನಗೂಡು: ಗುಡಿಸಲು ಮುಕ್ತ ಯೋಜನೆ ಸರ್ಕಾರದ ಮಹತ್ವದ ಯೋಜನೆ.ಯೋಜನೆ ಸಾಕಾರಗೊಳಿಸುವ ಜವಾಬ್ದಾರಿ ಕೊಳಚೆ ನಿರ್ಮೂಲನಾ ಮಂಡಳಿಗೆ ಸೇರಿದ್ದು. ನಂಜನಗೂಡಿನಲ್ಲಿ ಫಲಾನುಭವಿಗಳನ್ನ ಆಯ್ಕೆ ಮಾಡಿ ನೂರಕ್ಕೂ ಹೆಚ್ಚು ಫಲಾನುಭವಿಗಳಿಂದ ತಲಾ ಒಂದು ಲಕ್ಷ ಹಣ ಸಂಗ್ರಹಿಸಿ ಮೂರು ವರ್ಷವಾದರೂ ಮನೆ ಭಾಗ್ಯ ದಕ್ಕಿಲ್ಲ.

ಸ್ಲಂ ಬೋರ್ಡ್ ನಿರ್ಮಿಸಿಕೊಡುವ ಮನೆಗಾಗಿ ಕಾತುರದಿಂದ ಕಾಯುತ್ತಿರುವ ಫಲಾನುಭವಿಗಳು ಬೇಸತ್ತಿದ್ದಾರೆ. ಒಂದಿಷ್ಟು ವಿಷ ಕೊಡಿ ಸ್ವಾಮಿ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜಾಣಕುರುಡರಂತೆ ವರ್ತಿಸುತ್ತಿರುವ ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.

ಗುಡಿಸಲು ಮುಕ್ತ ಯೋಜನೆಯಲ್ಲಿ ನಂಜನಗೂಡಿನ ಚಾಮಲಾಪುರ ಹುಂಡಿ, ಅಶೋಕಾಪುರಂ ಹಾಗೂ ರಾಜಾಜಿ ಕಾಲೋನಿಯಲ್ಲಿ ಸುಮಾರು 309 ಫಲಾನುಭವಿಗಳನ್ನ ಆಯ್ಕೆ ಮಾಡಿತ್ತು. 4.70 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಿಸಿಕೊಡುವ ಯೋಜನೆ ಇದು. ಫಲಾನುಭವಿಗಳು ಒಂದು ಲಕ್ಷ ಭರಿಸಿದರೆ ಉಳಿದ 3.70 ಲಕ್ಷ ಸರ್ಕಾರ ಭರಿಸುವ ಯೋಜನೆ ಇದಾಗಿದೆ.

ಈ ಯೋಜನೆಯಡಿ ಚಾಮಲಾಪುರ ಹುಂಡಿಯ ಸುಮಾರು 100 ಕ್ಕೂ ಹೆಚ್ಚು ಫಲಾನುಭವಿಗಳು ಸಾಲ ಮಾಡಿ ಒಂದು ಲಕ್ಷದ ಡಿಡಿ ಪಾವತಿಸಿದ್ದಾರೆ. 2-3 ವರ್ಷ ಕಳೆದರೂ ಮನೆ ನಿರ್ಮಾಣ ಭಾಗ್ಯ ಲಭಿಸಿಲ್ಲ. ಹಣ ಪಾವತಿಸಿದ ಫಲಾನುಭವಿಗಳು ಸ್ಲಂ ಬೋರ್ಡ್ ಕಛೇರಿಗೆ ಸುತ್ತಿ ಸುತ್ತಿ ಬೇಸತ್ತಿದ್ದಾರೆ. ನಿರ್ಮಾಣವಾಗಬೇಕಿದ್ದ ಜಾಗದಲ್ಲಿದ್ದ ಗುಡಿಸಲುಗಳು ಕುಸಿದು ಬೀಳುತ್ತಿವೆ.

ವಾಸಕ್ಕೆ ಯೋಗ್ಯವಿಲ್ಲದ ಪರಿಸ್ಥಿತಿ ತಲುಪಿದೆ. ತಮ್ಮ ಕನಸಿನ ಮನೆಗಳಿಗಾಗಿ ಫಲಾನುಭವಿಗಳು ಕಾತುರದಿಂದ ಕಾಯುತ್ತಿದ್ದಾರೆ.ಮೂರು ವರ್ಷ ಕಳೆದರೂ ಯಾವುದೇ ಅಧಿಕಾರಿ ಇವರ ಮನವಿಗೆ ಸ್ಪಂದಿಸುತ್ತಿಲ್ಲ. ವಿಷ ಕೊಡಿ ಸಾಯುತ್ತೇವೆ ಎಂದು ಬೇಸರದಿಂದ ಹೇಳುತ್ತಿದ್ದಾರೆ.ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಫಲಾನುಭವಿಗಳ ಸಮಸ್ಯೆ ಬಗೆ ಹರಿಸಬೇಕಿದೆ.