ನಂಜನಗೂಡು: ತಮಿಳುನಾಡುಗೆ ಸಂಪರ್ಕ ಕಲ್ಪಿಸುವ ರಾಷ್ಟ್ರಿಯ ಹೆದ್ದಾರಿಯಿಂದ ದಿನನಿತ್ಯ ಓಡಾಡುವ ಸಾವಿರಾರು ವಾಹನ ಮತ್ತು ಪ್ರಯಾಣಿಕರಿಗೆ ರಸ್ತೆಯ ಬದಿಯಲ್ಲಿ ಬಿದ್ದಿರುವ ಕಸದ ರಾಶಿ ಸ್ವಾಗತ ಕೋರುತ್ತದೆ.
ನಂಜನಗೂಡು ತಾಲ್ಲೂಕಿನ ದೊಡ್ಡಕವಲಂದೆ ಗ್ರಾಮದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 150 ಎ ರಲ್ಲಿ ಬರುವ ರಸ್ತೆಯಲ್ಲಿ ಕಸದ ಕಿರಿಕಿರಿ ಉಂಟಾಗಿದೆ. ದೊಡ್ಡ ಕವಲಂದೆ ಗ್ರಾಮ ಪಂಚಾಯಿತಿಯ ಕಸದ ವಾಹನದಿಂದ ಹೆದ್ದಾರಿಯ ಎರಡು ಬದಿಯಲ್ಲಿ ವಿಲೇವಾರಿ ಮಾಡಲಾಗುತ್ತಿದೆ.
ಅಲ್ಲದೆ ಕವಲಂದೆ ಗ್ರಾಮದಿಂದ ಚುಂಚನಹಳ್ಳಿ, ಉಮ್ಮತ್ತೂರು , ಕೊಳ್ಳೇಗಾಲ, ಮಲೆ ಮಹದೇಶ್ವರ ಬೆಟ್ಟ, ಬಿಳಿಗಿರಿ ರಂಗನ ಬೆಟ್ಟಕ್ಕೆ ತೆರಳುವ ಮುಖ್ಯ ರಸ್ತೆಯಲ್ಲೂ ಕವಲಂದೆ ಗ್ರಾಮ ಪಂಚಾಯಿತಿಯ ಕಸದ ವಾಹನದ ಚಾಲಕ ರಸ್ತೆಯ ಎರಡು ಬದಿಯಲ್ಲಿ ಕಸ ವಿಲೇವಾರಿ ಮಾಡಿ ಪರಾರಿಯಾಗುತ್ತಿದ್ದಾನೆ.

ಇನ್ನು ದೊಡ್ಡ ಕವಲಂದೆ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮುಂಭಾಗದಲ್ಲೂ ಕಸವನ್ನು ಸುರಿಯಲಾಗುತ್ತಿದ್ದು, ವಿದ್ಯಾರ್ಥಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಶಾಲೆ ಮತ್ತು ಕಾಲೇಜುಗಳ ರಸ್ತೆ ಬದಿಯಲ್ಲೂ ಕಸ ಎಸೆಯಬಾರದು ಎಂಬ ವಿವೇಚನ ಗ್ರಾಮ ಪಂಚಾಯಿತಿಗೆ ಇಲ್ಲ. ರಸ್ತೆಗಳ ಅಂಚಿನಲ್ಲಿ ಅಪಾಯಕಾರಿ ತ್ಯಾಜ್ಯವನ್ನು ಬೀಸಾಡುವುದಲ್ಲದೆ ಅದಕ್ಕೆ ಬೆಂಕಿ ಹಚ್ಚಲಾಗುತ್ತಿದೆ.
ಇದರಿಂದ ರಸ್ತೆಗೆ ದಟ್ಟ ಹೊಗೆ ಆವರಿಸಿ ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ. ಹಲವು ಬಾರಿ ವಾಹನ ಸವಾರರಿಗೆ ರಸ್ತೆ ಕಾಣದ ಅಪಘಾತ ಆಗಿರುವ ಪ್ರಕರಣಗಳು ಉಂಟು. ಅಲ್ಲದೆ ಕಸದಲ್ಲಿರುವ ಪ್ಲಾಸ್ಟಿಕ್ ತ್ಯಾಜ್ಯ ಸೇರಿ ವಿಷಕಾರಕ ವಸ್ತುಗಳು ಸುಡುವುದರಿಂದ ಬರುವ ಹೊಗೆಯಿಂದ ಉಸಿರುಗಟ್ಟುವ ವಾತಾವರಣ ನಿರ್ಮಾಣ ಆಗುತ್ತಿದೆ. ಅಸ್ತಮಾ ಮತ್ತು ಶ್ವಾಸಕೋಶ ಕಾಯಿಲೆ ಇರುವ ರೋಗಿಗಳಿಗೆ ಕಂಟಕ ಎದುರಾಗಿದೆ.
ಅಲ್ಲದೆ ಜಾನುವಾರುಗಳಿಗೂ ತೊಂದರೆಯಾಗಿದೆ. ದೊಡ್ಡ ಕವಲಂದೆ ಗ್ರಾಮ ಪಂಚಾಯಿತಿಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕಸ ವಿಲೇವಾರಿ ಘಟಕ ಮಾಡದೆ ರಸ್ತೆಗಳ ಬದಿಯಲ್ಲಿ ಕಸವನ್ನು ವಿಲೇವಾರಿ ಮಾಡಲಾಗುತ್ತಿದ್ದು, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಕಸ ವಿಲೇವಾರಿ ಮಾಡುತ್ತಿರುವ ವಾಹನದ ಚಾಲಕ ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

