ನಂಜನಗೂಡು: ತೆಲುಗು, ಕನ್ನಡ ಸೇರಿದಂತೆ 17 ಭಾಷೆಗಳ ಜನರ ಮನ ಗೆದ್ದ “ಗಾನ ಕೋಗಿಲೆ” ಎಸ್.ಜಾನಕಿ ಅಮ್ಮನವರ ನೆನಪು ಇಂದಿಗೂ ಕರ್ನಾಟಕದ ಕಲಾವಿದರ ಮನದಲ್ಲಿ ಹಸಿರಾಗಿದೆ. ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಲುವಾಗಿ ನಂಜನಗೂಡು ನಗರದ ಶ್ರೀ ಕನ್ನಿಕಾ ಪರಮೇಶ್ವರಿ ಅಮ್ಮನವರ ದೇವಾಲಯದ ಸಭಾಂಗಣದಲ್ಲಿ ವಾಸವಿ ಗಾನ ಲಹರಿ ನಂಜನಗೂಡು ವತಿಯಿಂದ ಸ್ವರ ನಮನ ಕಾರ್ಯಕ್ರಮ ಅತ್ಯಂತ ಭಾವನಾತ್ಮಕವಾಗಿ ನಡೆಯಿತು.

ಕಾರ್ಯಕ್ರಮಕ್ಕೆ ವಾಸವಿ ಗಾನ ಲಹರಿಯ ಅಧ್ಯಕ್ಷೆ ನಮ್ರತಾ ರಾಘವೇಂದ್ರ ಸೇರಿದಂತೆ ಗಣ್ಯರು ಎಸ್. ಜಾನಕಿ ಅಮ್ಮನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಜಾನಕಮ್ಮನವರ ಗಂಟಲಲ್ಲಿ ಸರಸ್ವತಿಯೇ ನೆಲೆಸಿದ್ದಳು. ಅವರ ಹಾಡುಗಳು ಕೇವಲ ಹಾಡಲ್ಲ, ಅದು ಪ್ರತಿ ಮಹಿಳೆಯ ಬದುಕಿನ ಭಾಗ. ಇಂದಿಗೂ ಅವರ ಸ್ವರ ಕೇಳಿದಾಗ ಕಣ್ಣಲ್ಲಿ ನೀರು ಬರುತ್ತದೆ ಎಂದು ಭಾವುಕರಾಗಿ ನುಡಿದರು. ಬಳಿಕ ಮೌನಾಚರಣೆ ಮಾಡಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಕಾರ್ಯಕ್ರಮದ ಮುಖ್ಯ ಆಕರ್ಷಣೆ ಎಂದರೆ ಎಲ್ಲಾ ಮಹಿಳೆಯರು ಒಟ್ಟಾಗಿ ಜಾನಕಿ ಅಮ್ಮನವರು ಹಾಡಿರುವ 24 ಗೀತೆಗಳನ್ನು ಭಕ್ತಿ ಮತ್ತು ಭಾವದಿಂದ ಹಾಡಿದ್ದು ಎಲ್ಲರ ಗಮನ ಸೆಳೆಯಿತು. ಹಾಡುಗಳ ನಡುವೆ ಸಭಾಂಗಣದಲ್ಲಿ ಮೌನ, ಕಣ್ಣಲ್ಲಿ ನೀರು, ಮತ್ತು ಜಾನಕಮ್ಮನ ನೆನಪು ತುಂಬಿ ತುಳುಕಿತು. ಪ್ರತಿ ಸಾಲು ಮುಗಿದಾಗಲೂ ಜಾನಕಮ್ಮನಿಗೆ ನಮನ ಎಂಬ ಘೋಷಣೆ ಮೊಳಗಿತು.

ಈ ಸಂದರ್ಭದಲ್ಲಿ ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಜಿ.ಉಮೇಶ್, ವಾಸವಿ ಕ್ಲಬ್ ಅಧ್ಯಕ್ಷ ಜಿ.ನಾಗೇಶ್, ಯುವಜನ ಸಂಘದ ಅಧ್ಯಕ್ಷ ಗಣೇಶ್ ಪ್ರಸಾದ್, ಚಂದ್ರು, ನಿರ್ದೇಶಕಿಯರಾದ ಗಾಯತ್ರಿ ಬಾಲಾಜಿ, ಶೋಭ ಕನಕರಾಜು, ಶಿಲ್ಪ, ಭಾನು, ಭಾಗ್ಯಲಕ್ಷ್ಮಿ, ಚಾಂದಿನಿ, ಚೇತನ, ದಿವ್ಯ, ಗಾನವಿ, ಜ್ಯೋತಿ, ಲಕ್ಷ್ಮಿ, ಲತಾ, ನಿಖಿತಾ, ಪೂರ್ಣಿಮಾ, ರಾಣಿ, ರಮ್ಯ, ಸವಿತಾ, ಸಂಧ್ಯಾ, ಸುಮ, ವನಜ, ವಿಜಯಲಕ್ಷ್ಮಿ ಮತ್ತು ಹಲವು ಮಹಿಳೆಯರು ಈ ಸ್ವರ ನಮನದಲ್ಲಿ ಪಾಲ್ಗೊಂಡು ಜಾನಕಮ್ಮನವರಿಗೆ ಗೌರವ ಸಲ್ಲಿಸಿದರು.