ನಂಜನಗೂಡು: ತಾಲ್ಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಮೈಸೂರು ವಾಸನ್ ಕಣ್ಣಿನ ಆಸ್ಪತ್ರೆ ಮತ್ತು ಹೊಸಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘ ಸಂಯುಕ್ತ ಆಶ್ರಯದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರಕ್ಕೆ ಡೈರಿ ಅಧ್ಯಕ್ಷ ಪ್ರಕಾಶ್ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಕಣ್ಣಿನ ಸಮಸ್ಯೆ ಗಂಭೀರ ಸ್ವರೂಪದ ಕಾಯಿಲೆಯಾಗಿ ಪರಿಣಮಿಸುತ್ತಿದೆ. ಆರಂಭದಲ್ಲೇ ತಪಾಸಣೆ ಮಾಡಿಸಿ, ಸಮಸ್ಯೆ ಕಂಡರೆ ಚಿಕಿತ್ಸೆ ಪಡೆಯಬೇಕು.
ಕಣ್ಣಿನ ತಪಾಸಣೆ ನಡೆಸಿ, ಅಗತ್ಯವಿದ್ದವರಿಗೆ ಉಚಿತವಾಗಿ ಕನ್ನಡಕ ವಿತರಿಸುವುದರ ಜೊತೆಗೆ ಕಣ್ಣಿನ ಶಸ್ತ್ರಚಿಕಿತ್ಸೆಗೆ ನೆರವಾಗುವ ಉದ್ದೇಶದಿಂದ ಈ ಶಿಬಿರವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಶಿಬಿರದಲ್ಲಿ ವೈದ್ಯಾಧಿಕಾರಿಗಳ ತಂಡ ಕಣ್ಣಿನ ಪೊರೆ, ವಾರೆಗಣ್ಣು, ಹತ್ತಿರ ಮತ್ತು ದೂರ ದೃಷ್ಟಿ ದೋಷ, ನೀರು ಸೋರುವಿಕೆ, ಗ್ಲಾಕೋಮಾ, ಕಣ್ಣಿನಲ್ಲಿ ಗೀಜು ಬರುವುದು, ಕಣ್ಣಿನಲ್ಲಿ ಬಿರುಕು ಉಂಟಾಗುವುದು, ರಾತ್ರಿ ಕುರುಡು ಸೇರಿದಂತೆ ಇನ್ನಿತರ ಕಣ್ಣಿನ ಸಮಸ್ಯೆಗಳ ಕುರಿತು ಪರೀಕ್ಷೆ ನಡೆಸಿ ಕೆಲವರಿಗೆ ಕನ್ನಡಕಗಳ ಬಳಕೆಗೆ ಸಲಹೆ ನೀಡಿದರು.
ಸಕ್ಕರೆ ಕಾಯಿಲೆ ತಪಾಸಣೆ ನಡೆಸಿ ಔಷಧಿಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದರು. ಹೊಸಹಳ್ಳಿ, ಪಾಳ್ಯ, ಕರಳಪುರ , ದೇವಿರಮ್ಮನಹಳ್ಳಿ, ಕುರಹಟ್ಟಿ ಗ್ರಾಮಗಳಿಂದ ನೂರು ಹೆಚ್ಚು ಸಂಖ್ಯೆಯ ಫಲಾನುಭವಿಗಳು ಆಗಮಿಸಿ ನೇತ್ರ ತಪಾಸಣೆ ಮಾಡಿಸಿಕೊಂಡರು.
ಈ ಸಂದರ್ಭದಲ್ಲಿ ಡೈರಿ ಕಾರ್ಯದರ್ಶಿ ಮಹದೇವಯ್ಯ, ಗ್ರಾಮ ಪಂಚಾಯಿತಿ ಸಿಬ್ಬಂದಿ ಮಹೇಶ್, ಮುಖ್ಯ ಶಿಕ್ಷಕ ನಾಗರಾಜ್, ವಾಸನ್ ಕಣ್ಣಿನ ಆಸ್ಪತ್ರೆಯ ಸಿಬ್ಬಂದಿಗಳಾದ ಪರಿಮಳ, ನೇತ್ರಾಧಿಕಾರಿ, ಡಾ.ಪ್ರವೀಣ್ ಕುಮಾರ್, ಸಂಯೋಜಕರಾದ, ಎ.ಎಂ ಮಹೇಶ್, ಯುವ ಕಾಂಗ್ರೆಸ್ ಮುಖಂಡ ಹೆಚ್.ಎಂ ಚೆಲುವಸ್ವಾಮಿ ಸೇರಿದಂತೆ ಹಲವರು ಭಾಗವಹಿಸಿದ್ದರು.

