ಮೈಸೂರು: ನಗರದ ವಿವಿಧೆಡೆ ಕಳ್ಳತನ ಮಾಡಿದ್ದ ಒಂದೇ ಕುಟುಂಬದ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಸಿಸಿಬಿ ಪೊಲೀಸರು ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ, ಕಾರು, ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಜೂ.6ರಂದು ಶ್ಯಾದನಹಳ್ಳಿ ಗ್ರಾಮದ ಮನೆಯೊಂದರಲ್ಲಿ ಸುಮಾರು 11.40 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನವಾಗಿತ್ತು. ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿ ತನಿಖೆ ಕೈಗೊಂಡಾಗ ಜು.16ರಂದು ಎನ್.ಆರ್.ಮೊಹಲ್ಲಾದ ಶಿವಾಜಿ ರಸ್ತೆಯಲ್ಲಿ ಓರ್ವ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಇತರ ಮೂವರು ಆರೋಪಿಗಳೊಂದಿಗೆ ಸೇರಿ ಮೈಸೂರು ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಕಳ್ಳತನ ಮಾಡಿರುವುದಾಗಿ ಸತ್ಯ ಬಾಯ್ಬಿಟ್ಟಿದ್ದಾನೆ. ಈತ ನೀಡಿದ ಮಾಹಿತಿ ಆಧರಿಸಿ ಆ.21ರಂದು ಮೂವರು ಆರೋಪಿಗಳನ್ನು ಕೆಆರ್‌ಎಸ್ ರಸ್ತೆಯ ಕೆಐಡಿಬಿ ಕಚೇರಿ ಬಳಿ ಬಂಧಿಸಲಾಗಿದೆ. ಇವರೆಲ್ಲರೂ ಒಂದೇ ಕುಟುಂಬದವರಾಗಿದ್ದು, ಕಳ್ಳತನ, ಇನ್ನಿತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು ಎಂದು ತಿಳಿಸಿದರು.
ಬಂಧಿತರಲ್ಲಿ ಮೂವರು ಜಿಲ್ಲಾ ವ್ಯಾಪ್ತಿಯ 11 ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಬಂಧಿತರಿAದ 45 ಲಕ್ಷ ಮೌಲ್ಯದ 551 ಗ್ರಾಂ ಚಿನ್ನಾಭರಣ, 1.4 ಕೆಜಿ ಬೆಳ್ಳಿ ಪದಾರ್ಥಗಳು, 2 ಕಾರು, 3 ದ್ವಿಚಕ್ರ ವಾಹನ, 1 ಪಿಸ್ತೂಲ್, ಜೀವಂತ ಗುಂಡುಗಳು, 2 ಮೊಬೈಲ್, ಕೃತ್ಯಕ್ಕೆ ಬಳಸಿದ್ದ ರಾಡು, ಸ್ಕೂçö್ಯ ಡ್ರೆöÊವರ್, 2 ಹ್ಯಾಂಡ್ ಗ್ಲೌಸ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರಿಂದ ನಗರ ವ್ಯಾಪ್ತಿಯ 5, ಜಿಲ್ಲೆಯ 1, ಮಂಡ್ಯದ 7 ಕಳವು, ಹಾಗೂ ಜಿಲ್ಲೆಯ 1 ಮಂಡ್ಯ 2 ಸುಲಿಗೆ ಪ್ರಕರಣಗಳು ಪತ್ತೆಯಾಗಿವೆ ಎಂದರು.
ಆರೋಪಿಯೊಬ್ಬನ ಬಳಿ 4.66 ಕೆ.ಜಿ ಗಾಂಜಾ, 1 ಪಿಸ್ತೂಲ್ ಹಾಗೂ 1 ಕಾರು ದೊರೆತಿದೆ. ಇವನ ವಿರುದ್ಧ ವಿವಿಧೆಡೆ 17 ಪ್ರಕರಣ ಕಳವು ಪ್ರಕರಣಗಳಿಗೆ. ಆರೋಪಿಗಳಲ್ಲಿ ಒಬ್ಬನ ಮೇಲೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 3 ಕಳವು ಪ್ರಕರಣ, ಮತ್ತೊಬ್ಬನ ಮೇಲೆ 36, ಇನ್ನೊಬ್ಬನ ಮೇಲೆ 17 ಸ್ವತ್ತು ಕಳವು ಪ್ರಕರಣಗಳು ದಾಖಲಾಗಿವೆ ಎಂದರು.
ಹಿಂದೆ ಸೈಬರ್ ಕಳ್ಳರು ಸಾರ್ವಜನಿಕರಿಂದ ಒಟಿಪಿ ಪಡೆದು ಅವರ ಬ್ಯಾಂಕ್ ಖಾತೆಗೆ ಕನ್ನ ಹಾಕುತ್ತಿದ್ದರು. ಆದರೆ, ಇದೀಗ ಅವರ ತಂತ್ರ ಬದಲಾಗಿದೆ. ಷೇರು ಮಾರ್ಕೆಟ್ ಮೇಲೆ ಹಣ ಹೂಡಿಕೆ ಮಾಡಿದರೆ ದುಪ್ಪಟ್ಟು ಮಾಡಿಕೊಡುವುದಾಗಿ ಆಮಿಷವೊಡ್ಡುತ್ತಾರೆ. ಫೇಸ್‌ಬುಕ್, ವಾಟ್ಸಾಪ್ ಗ್ರೂಪ್‌ಗಳ ಮೂಲಕ ಸಂದೇಶ ಕಳುಹಿಸುತ್ತಾರೆ. ಇದನ್ನು ನಂಬಿ ಹಣ ಹೂಡಿಕೆ ಮಾಡಿ ಮೋಸ ಹೋಗುತ್ತಾರೆ.
ಮೈಸೂರಿನಲ್ಲಿ ಈ ವರ್ಷ ಇಂತಹ 61 ಪ್ರಕರಣಗಳು ದಾಖಲಾಗಿದ್ದು, 32 ಕೋಟಿ ಕಳೆದುಕೊಂಡಿದ್ದಾರೆ. ಇದಲ್ಲದೆ ನಿಮಗೆ ಗಾಂಜಾ, ಡ್ರಗ್ಸ್ ಪಾರ್ಸೆಲ್ ಬಂದಿದೆ. ನಿಮ್ಮ ವಿರುದ್ಧ ಪ್ರಕರಣ ದಾಖಲಿಸದೆ ಇರಲು ಹಣ ಕೊಡಬೇಕು ಎಂದು ಬೆದರಿಸಿ ಸುಲಿಗೆ ಮಾಡಿರುವ 19 ಪ್ರಕರಣಗಳು ದಾಖಲಾಗಿದ್ದು, 20 ಲಕ್ಷಕ್ಕೂ ಹೆಚ್ಚು ಹಣ ಕಳೆದುಕೊಂಡಿದ್ದಾರೆ. ಜತೆಗೆ ಅರೆಕಾಲಿಕ ಉದ್ಯೋಗ ಕೊಡಿಸುವುದಾಗಿ ನಂಬಿಸಿ ವಂಚಿಸುವ ಪ್ರಕರಣಗಳೂ ದಾಖಲಾಗುತ್ತಿವೆ. ಹೀಗಾಗಿ ಸಾರ್ವಜನಿಕರು ಎಚ್ಚರಿಕೆಯಿಂದಿರಬೇಕು ಎಂದು ಸೀಮಾ ಲಾಟ್ಕರ್ ತಿಳಿಸಿದರು.
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೆಲ ಕೈದಿಗಳಿಗೆ ವಿಶೇಷ ಆತಿಥ್ಯ ನೀಡುತ್ತಿರುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಸೀಮಾ ಲಾಟ್ಕರ್, ಮೈಸೂರಿನ ಕಾರಾಗೃಹಕ್ಕೆ ಈ ಹಿಂದೆ ಮೂರು ತಿಂಗಳಿಗೊಮ್ಮೆ ಭೇಟಿ ನೀಡುತ್ತಿದ್ದೆವು. ಇನ್ನು ಮುಂದೆ ಪ್ರತಿ ತಿಂಗಳು ಮೈಸೂರು ಜೈಲಿಗೆ ದಿಢೀರ್ ಭೇಟಿ ಕೊಡುತ್ತೇವೆ. ಮೈಸೂರಿನಲ್ಲಿ ಯಾವ ಕೈದಿಗೂ ವಿಶೇಷ ಆತಿಥ್ಯ ನೀಡುತ್ತಿಲ್ಲ ಎಂದು ಮಾಹಿತಿ ನೀಡಿದರು.

