ನಂಜನಗೂಡು: ವನ್ಯಜೀವಿ ಮಾನವ ಸಂಘರ್ಷ ತಾರಕಕ್ಕೆ ಏರುತ್ತಿದೆ. ಕಾಡುಪ್ರಾಣಿಗಳ ದಾಳಿ ಮನುಕುಲಕ್ಕೆ ಮಾರಕವಾಗುತ್ತಿದೆ. ಕಾಡಂಚಿನ ಗ್ರಾಮದ ಜನತೆ ಭೀತಿಗೆ ಸಿಲುಕಿದ್ದಾರೆ. ಕಾಡುಪ್ರಾಣಿಗಳ ದಾಳಿಯಿಂದ ರಕ್ಷಿಸುವುದು ಅರಣ್ಯ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ.
ಕಾಡಂಚಿನ ಜನರ ರಕ್ಷಣೆಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಆದೇಶದ ಮೇರೆಗೆ ಬಂಡಿಪುರ ರಾಷ್ಟ್ರೀಯ ಉದ್ಯಾನವನದ ಸಿಸಿಎಫ್ ಪ್ರಭಾಕರನ್ ಎ ಸಿ ಎಫ್ ಪರಮೇಶ್ ನೇತೃತ್ವದಲ್ಲಿ ಅರಣ್ಯ ಇಲಾಖೆ ಸೂಪರ್ ಪ್ಲಾನ್ ಜಾರಿಗೆ ತಂದಿದೆ. ಫೇಸ್ ಮಾಸ್ಕ್ ಗಳನ್ನ ವಿತರಿಸಿ ಜಾಗೃತಿ ಮೂಡಿಸುತ್ತಿದೆ.
ಹೆಡಿಯಾಲ ಅರಣ್ಯ ಪ್ರದೇಶದ ಕಾಡಂಚಿನ ಗ್ರಾಮದ ಜನತೆ ನಲುಗಿ ಹೋಗಿದ್ದಾರೆ. ಹುಲಿ ದಾಳಿಯಿಂದಾಗ ಜನಜಾನುವಾರುಗಳನ್ನ ಕಳೆದು ಕೊಂಡಿದ್ದಾರೆ. ಕೃಷಿ ಚಟುವಟಿಕೆಗಳಿಗೆ ತೆರಳಲು ಅಂಜುತ್ತಿದ್ದಾರೆ. ಈ ಹಿನ್ನಲೆ ಅರಣ್ಯ ಇಲಾಖೆ ಫೇಸ್ ಮಾಸ್ಕ್ ವಿತರಿಸುತ್ತಿದೆ. ಮಾಸ್ಕ್ ಗಳನ್ನ ತಲೆಯ ಹಿಂಬಾಗಕ್ಕೆ ಅಳವಡಿಸಿಕೊಂಡು ಕೃಷಿ ಚಟುವಟಿಕೆಗಳಲ್ಲಿ ಭಾಗಿಯಾಗುವಂತೆ ಆತ್ಮಸ್ಥೈರ್ಯ ತುಂಬುತ್ತಿದ್ದಾರೆ.
ದನಕರುಗಳನ್ನ ಮೇಯಿಸುವಾಗ, ಬೈಕ್ ಗಳಲ್ಲಿ ಸಾಗುವಾಗ, ಕೃಷಿ ಚಟುವಟಿಕೆಯಲ್ಲಿ ಭಾಗಿಯಾಗುವಾಗ ತಲೆಯ ಹಿಂಬದಿಗೆ ಮಾಸ್ಕ್ ಧರಿಸುವಂತೆ ಮನವಿ ಮಾಡುತ್ತಿದ್ದಾರೆ. ಬಹುತೇಕ ಪ್ರಾಣಿಗಳು ಹಿಂದಿನಿಂದ ದಾಳಿ ಮಾಡುವುದು ಸಹಜ. ಹೀಗಾಗಿ ಮಾಸ್ಕ್ ಧರಿಸಿದ್ದರೆ ಪ್ರಾಣಿಗಳು ಗೊಂದಲಕ್ಕೆ ಸಿಲುಕಿ ದಾಳಿ ನಡೆಸಲು ಅಂಜುತ್ತವೆ.
ಈ ದೃಷ್ಟಿಯಿಂದ ಮಾಸ್ಕ್ ಗಳನ್ನ ವಿತರಿಸಿ ಹೇಗೆ ಧರಿಸಬೇಕೆಂದು ಜಾಗೃತಿ ಮೂಡಿಸುತ್ತಿದ್ದಾರೆ. ಕಳೆದ ಎರಡು ದಿನಗಳಿಂದ ಹತ್ತು ಸಾವಿರಕ್ಕೂ ಹೆಚ್ಚು ಮಾಸ್ಕ್ ಗಳನ್ನ ವಿತರಿಸಿದ್ದಾರೆ. ಗ್ರಾಮಸ್ಥರೂ ಸಹ ಅರಣ್ಯ ಇಲಾಖೆ ಸಿಬ್ಬಂದಿಗಳ ಮನವಿಗೆ ಸ್ಪಂದಿಸಿ ಮಾಸ್ಕ್ ಧರಿಸಿ ಓಡಾಡುತ್ತಿದ್ದಾರೆ. ಈ ಸೂಪರ್ ಪ್ಲಾನ್ ವರ್ಕ್ ಔಟ್ ಆದರೆ ಎಲ್ಲರಿಗೂ ನಿಟ್ಟುಸಿರು ಬಿಡುವಂತಾಗುತ್ತದೆ.

