ನಂಜನಗೂಡು: ಜನಪದ ಸಂಭ್ರಮಾಚರಣೆಯಲ್ಲಿ ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಸಾಂಪ್ರದಾಯಕ ಉಡುಗೆ ತೊಟ್ಟು ಸಂಭ್ರಮಿಸಿದರು.
ನಂಜನಗೂಡು ನಗರದ ದೇವಿರಮ್ಮನಹಳ್ಳಿ ವೃತ್ತದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಆಯೋಜಿಸಲಾಗಿದ್ದ ಜನಪದ ಸಂಭ್ರಮ ಕಾರ್ಯಕ್ರಮಕ್ಕೆ ಶಾಸಕ ದರ್ಶನ್ ಧ್ರುವನಾರಾಯಣ್ ಬೃಹತ್ ಮೆರವಣಿಗೆಗೆ ಚಾಲನೆ ನೀಡಿದರು.
ಮೆರವಣಿಗೆಯಲ್ಲಿ ಎತ್ತಿನ ಗಾಡಿ, ಕಂಸಾಳೆ ನೃತ್ಯ, ಡೊಳ್ಳು ಕುಣಿತ, ನಗಾರಿ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಮತ್ತಷ್ಟು ಮೆರಗು ತಂದವು. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನಂಜನಗೂಡು, ಕಾಲೇಜು ಶಿಕ್ಷಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಜನಪದ ಸಂಭ್ರಮ -2025 ರ ವೇದಿಕೆ ಕಾರ್ಯಕ್ರಮವನ್ನು ಧವಸ ಧಾನ್ಯಗಳ ರಾಶಿಗೆ ಪೂಜೆ ಸಲ್ಲಿಸಿ, ಭತ್ತ ಕುಟ್ಟುವ ಮೂಲಕ ಶಾಸಕ ದರ್ಶನ್ ಧ್ರುವನಾರಾಯಣ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ನಮ್ಮ ಜನಪದ ಸಂಸ್ಕೃತಿಯ ಅದ್ಭುತತೆ ಹಾಗೂ ಸಂಸ್ಕೃತಿ ಪರಂಪರೆಯ ಪ್ರಾಮುಖ್ಯತೆನ್ನು ನೆನಪಿಸುವ ಮಹತ್ತರವಾದ ಕಾರ್ಯ ಇದಾಗಿದ್ದು, ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ ಎಂಬುದು ಕೇವಲ ಶೀರ್ಷಿಕೆ ಅಲ್ಲದೆ ಅದನ್ನು ಪಾಲಿಸುವ ಕೆಲಸ ಆಗಬೇಕು, ನಡೆ-ನುಡಿಗೆ ಆದರ್ಶವಾಗಬೇಕು.
ಇಂತಹ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳು, ಯುವಜನತೆ ನಮ್ಮ ನಾಡು-ನುಡಿಯ ಬಗ್ಗೆ ಹೆಮ್ಮೆ ಪಡುವಂತೆ ಮಾಡುವುದು ಅತ್ಯಂತ ಶ್ಲಾಘನೀಯ. ಯುವ ಸಮುದಾಯ ನಮ್ಮ ಪೂರ್ವಜರ ಕಲೆ, ಸಂಸ್ಕೃತಿ, ಸಾಹಿತ್ಯವನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ನಗರಸಭಾ ಅಧ್ಯಕ್ಷ ಎನ್ ಶ್ರೀಕಂಠ, ಬೆಂಗಳೂರಿನ ಮುಖ್ಯ ಆಡಳಿತ ಅಧಿಕಾರಿ ಟಿ.ಆರ್. ಶೋಭಾ, ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಬಿ.ಚಂದ್ರಶೇಖರ, ಸಾಹಿತಿ ಡಾ. ಬೈರಮಂಗಲ ರಾಮೇಗೌಡ, ಪ್ರಾಂಶುಪಾಲ ಬಿ.ಕೆ ಕೆಂಪೇಗೌಡ, ಕನ್ನಡ ಪ್ರಾಧ್ಯಾಪಕ ಡಾ. ಜಯ ಶಂಕರ, ಉಪನ್ಯಾಸಕ ಹರೀಶ್, ಡಾ. ಕೆಂಪಮ್ಮ ಸೇರಿದಂತೆ ಮತ್ತಿತರರು ಹಾಜರಿದ್ದರು.

