ನಂಜನಗೂಡು: ವರುಣಾ ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲ್ಲೂಕಿನ ಕಿರುಗುಂದ ಗ್ರಾಮದಲ್ಲಿ ಶ್ರೀ ಬಿಳಿಗಿರಿ ರಂಗನಾಥಸ್ವಾಮಿಯ ದೇವಸ್ಥಾನದ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಇಂಪು ಇಂಚರ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ವತಿಯಿಂದ ಏರ್ಪಡಿಸಲಾಗಿದ್ದ ಬಿಳಿಗಿರಿ ರಂಗಯ್ಯನ ನೋಡೋಣ ಬನ್ನಿ ಜನಪದ ಕಲಾಪ್ರದರ್ಶನ, ಜಾನಪದ ಕಥೆ, ಗಾಯನ, ಸುಗಮಸಂಗೀತ, ಕಾರ್ಯಕ್ರಮವನ್ನು ಮೃಗಾಲಯದ ಪ್ರಾಧಿಕಾರದ ಅಧ್ಯಕ್ಷ ಹಾಡ್ಯ ಕೆ.ರಂಗಸ್ವಾಮಿ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಸಾಂಸ್ಕೃತಿಕ ಸಂಘ-ಸಂಸ್ಥೆಗಳು ನಾಡಿನ ಮೂಲ ಕಲೆಗಳಾದ ತಮಟೆ, ಸೋಬಾನೆ, ಕೋಲಾಟ ದೊಣ್ಣೆವರಸೆ, ಪೂಜಾಕುಣಿತ, ವೀರಾಗಾಸೆ, ಜನಪದ ಕಥೆಗಳ ಮುಂತಾದ ಅನೇಕ ಕಲೆಗಳ ಉಳಿವಿಗೆ ಶ್ರಮಿಸುತ್ತಿದ್ದು, ಇಂತಹ ಸಂಘ-ಸಂಸ್ಥೆಗಳಿಂದ ಜನಪದ ಕಲೆಗಳು ಉಳಿಯುತ್ತಾ ಬಂದಿದೆ. ಕಲಾವಿದರಿಗೆ ಸರ್ಕಾರದ ವತಿಯಿಂದ ಹೆಚ್ಚಿನ ಅನುದಾನ ನೀಡುವಂತೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ರವರು ಮತ್ತು ಸಚಿವರ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.
ಮಖ್ಯ ಅತಿಥಿಯಾಗಿ ಆಗಮಿಸಿದ್ದ ನಿವೃತ್ತ ಆರ್.ಟಿ ಓ ನಿರೀಕ್ಷಕರಾದ ಕೆ.ಸಿ ಮುನಿಸ್ವಾಮಿ ಮಾತನಾಡಿ, ಬಿಳಿಗಿರಿರಂಗಸ್ವಾಮಿ ಸಾಂಸ್ಕೃತಿಕ ದಾಸಪರಂಪರೆ ಭಾಗವಾಗಿದ್ದು, ಈ ಪರಂಪರೆಯು ಗ್ರಾಮೀಣ ಭಾಗದಲ್ಲಿ ಕೆಲವು ಜನರಲ್ಲಿ ಮಾತ್ರ ಇದೆ. ಈ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಯುವ ಪೀಳಿಗೆಗೆ ಪರಿಚಯಿಸುವ ಪ್ರಯತ್ನ ಮಾಡಬೇಕು ಎಂದರು.
ಇದಕ್ಕೂ ಮುನ್ನ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷೆ ಕೋಮಲಾ ಸಿದ್ದರಾಜು ಜನಪದ ಕಲಾತಂಡಗಳಿಗೆ ಚಾಲನೆ ನೀಡಿದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಜನಪದ ಕಲಾ ತಂಡಗಳು ಪ್ರದರ್ಶನ ನೀಡಿದವು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯ ಆನಂದಕುಮಾರ್, ಯಜಮಾನರಾದ ಶಿವಮಲ್ಲಯ್ಯ, ಕೆ.ಆರ್ ವೆಂಕಟೇಶ್, ಶಿವನಾಗ, ನಾಗರಾಜು, ರಂಗಸ್ವಾಮಿ ಟ್ರಸ್ಟ್ ಸದಸ್ಯರಾದ ಗಟ್ಟವಾಡಿ ಶಿವಯ್ಯ, ವಿದ್ವಾನ್ ಕೆ.ನಂಜುಂಡಯ್ಯ, ಕೂಗಲೂರು ಶಿವರಾಜು, ಪದ್ಮ, ಶ್ರೀನಿವಾಸ ಮೂರ್ತಿ, ಮಂಜು, ರಾಘವೇಂದ್ರ, ಮಾದೇಶ, ನಾಗೇಶ ಮೂರ್ತಿ, ಪುರುಷೋತ್ತಮ ಸೇರಿದಂತೆ ಹಲವರು ಹಾಜರಿದ್ದರು.

