ನಂಜನಗೂಡು: ಮಾ.30 ರಂದು ದಕ್ಷಿಣ ಕಾಶಿ ನಂಜನಗೂಡು ಶ್ರೀ ನಂಜುಂಡೇಶ್ವರ ಸ್ವಾಮಿಯ ದೊಡ್ಡಜಾತ್ರಾ ಮಹೋತ್ಸವ ಅಂಗವಾಗಿ ನಂಜನಗೂಡಿನಲ್ಲಿ ಇಂದಿನಿಂದ ಗುರಳಾಪುರಿ ಉತ್ಸವವನ್ನು ಏರ್ಪಡಿಸಲಾಗಿದೆ.

ಶ್ರೀ ನಂಜುಂಡೇಶ್ವರ ಸ್ವಾಮಿಯ ಗೌತಮ ಪಂಚ ಮಹಾ ರಥೋತ್ಸವ ಹಿನ್ನೆಲೆಯಲ್ಲಿ ಶಾಸಕ ದರ್ಶನ್ ಧ್ರುವನಾರಾಯಣ್ ರವರ ನೇತೃತ್ವದಲ್ಲಿ ಇತಿಹಾಸದಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಗರಳಾಪುರಿ ಉತ್ಸವ ನಡೆಸಲಾಗುತ್ತಿದ್ದು, ಮಾ.21 ರಿಂದ 29 ರವರೆಗೆ ವಿವಿಧ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳು ನಡೆಯಲಿದೆ. ಅದರಂತೆ ತಾಲ್ಲೂಕಿನಾದ್ಯಂತ ಮಹಿಳೆಯರಿಗೆ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.

ಪ್ರತಿ ಮನೆ ಮನೆ ಮುಂಭಾಗದಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಶಾಲಾ-ಕಾಲೇಜುಗಳ ಆವರಣದಲ್ಲಿ ಮಹಿಳೆಯರು ತಮ್ಮ ಕೈಚಳಕದಿಂದ ಚುಕ್ಕಿ ಹಾಕಿ, ಬಣ್ಣ ಬಣ್ಣದ ರಂಗೋಲಿಗಳನ್ನು ಬಿಟ್ಟು ಫೋಟೋಗಳಿಗೆ ಪೋಸ್ ಕೊಟ್ಟಿದ್ದಾರೆ. ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದ ಸರ್ಕಾರದಲ್ಲಿ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗಿದೆ.

ಶಕ್ತಿ ಯೋಜನೆ, ಗೃಹಲಕ್ಷ್ಮಿ, ಗೃಹ ಜ್ಯೋತಿ, ಯುವ ನಿಧಿ, ಅನ್ನಭಾಗ್ಯ ಯೋಜನೆಗಳು ರಾಜ್ಯದಲ್ಲಿ ಯಶಸ್ವಿಯಾಗಿದ್ದು, ಪಂಚ ಗ್ಯಾರಂಟಿ ಯೋಜನೆಗಳ ಚಿತ್ರಗಳನ್ನು ರಂಗೋಲಿಯಲ್ಲಿ ಅರಳಿಸಿ, ಗಮನ ಸೆಳೆದಿದ್ದಾರೆ. ನಂಜನಗೂಡಿನ ಅಶೋಕಪುರಂ ಬಡಾವಣೆಯಲ್ಲಿ ಮಹಿಳೆಯರ ಉಚಿತ ಬಸ್ ಪ್ರಯಾಣ ಮಾಡುತ್ತಿರುವ ಸಾರಿಗೆ ಬಸ್ ಚಿತ್ರಣವನ್ನು ರಂಗೋಲಿ ಬಿಡಿಸಿ, ಪಂಚ ಗ್ಯಾರಂಟಿ ಯೋಜನೆಗಳ ಬಗ್ಗೆ ಸಂದೇಶ ಸಾರಿದ್ದಾರೆ. ಮಹಿಳೆಯರು ಮತ್ತು ಯುವತಿಯರು ಹಾಗೂ ಕೆಲ ಗ್ರಾಮಗಳಲ್ಲಿ ಪುರುಷರು ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿರುವುದು ಕಂಡುಬಂದಿದೆ. ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರಮಾಣಪತ್ರ ಮತ್ತು ವಿಜೇತರಾದ ಸ್ಪರ್ಧಿಗಳಿಗೆ ಸೂಕ್ತ ಬಹುಮಾನವನ್ನು ನೀಡಲಾಗುತ್ತದೆ.