ಮೈಸೂರು: ಅಗ್ನಿ ಅವಘಡದಲ್ಲಿ ವೃದ್ದರೊಬ್ಬರು ಸಜೀವವಾಗಿ ದಹನವಾದ ದುರ್ಘಟನೆ ಮೈಸೂರಿನ ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಸಿದ್ದನಾಯ್ಕ(60) ಮೃತ ದುರ್ದೈವಿ.ಮಂಡಿಮೊಹಲ್ಲಾದ ಸರ್ ಖಾಜಿ ರಸ್ತೆಯಲ್ಲಿ ದುರ್ಘಟನೆ ಸಂಭವಿಸಿದೆ. ಕೂಲಿ ಕೆಲಸ ಮಾಡುವ ಪತ್ನಿ ಪುಟ್ಟಮ್ಮ ಹಾಗೂ ಮೊಮ್ಮಗಳು ಲಕ್ಷ್ಮಿ ಮನೆಯಿಂದ ಹೊರಗೆ ತೆರಳಿದ ವೇಳೆ ಘಟನೆ ನಡೆದಿದೆ.

ಗುಜರಿ ವ್ಯಾಪಾರ ಮಾಡುತ್ತಿದ್ದ ಸಿದ್ದನಾಯ್ಕ ಮನೆಯಲ್ಲಿ ಹಳೆ ಪದಾರ್ಥಗಳನ್ನ ಸಂಗ್ರಹಿಸಿ ಇಟ್ಟಿದ್ದರೆಂದು ಹೇಳಲಾಗಿದೆ. ಬೀಡಿ ಸೇದಿ ಎಸೆದ ಪರಿಣಾಮ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ಇಡೀ ಮನೆ ವ್ಯಾಪಿಸಿದೆ ಎಂದು ಹೇಳಲಾಗಿದೆ.

ಮನೆಯಲ್ಲಿದ್ದ ಸಿದ್ದನಾಯ್ಕ ಹೊರಕ್ಕೆ ಬರಲು ಸಾಧ್ಯವಾಗದೆ ಸಜೀವವಾಗಿ ಸುಟ್ಟುಹೋಗಿದ್ದಾರೆ. ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಆದ್ರೆ ಸಿದ್ದನಾಯ್ಕ ಸಜೀವವಾಗಿ ದಹನವಾಗಿದ್ದಾರೆ. ಸ್ಥಳಕ್ಕೆ ಮಂಡಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.