ಮೈಸೂರು: ವ್ಯವಹಾರದಲ್ಲಿ ಪಾಲುದಾರರನ್ನಾಗಿ ಮಾಡಿಕೊಳ್ಳುವ ಆಮಿಷ ನೀಡಿ 35 ಲಕ್ಷ ವಂಚಿಸಿದ ಆರೋಪದ ಮೇಲೆ ಮೇಟಗಳ್ಳಿ ಪೊಲೀಸ್ ಠಾಣೆ ಪೇದೆ ಪಿ.ಜೆ.ರಾಜು ಹಾಗೂ ಅವರ ಪತ್ನಿ ನಂದಿನಿ ಮೇಲೆ ಕೆ.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಂಚನೆಗೆ ಒಳಗಾದ ಮಹಾಲಕ್ಷ್ಮಿ, ಮಂಜುಳಾ ಹಾಗೂ ಸಿದ್ದೇಶ್ ಎಂಬುವವರು ಪ್ರಕರಣ ದಾಖಲಿಸಿದ್ದಾರೆ. 2022 ರಲ್ಲಿ ಪೇದೆ ರಾಜುರವರು ಅಶೋಕಾಪುರಂ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುವ ವೇಳೆ ಮಹಾಲಕ್ಷ್ಮಿ, ಮಂಜುಳಾ ಹಾಗೂ ಸಿದ್ದೇಶ್ ರವರ ಬಳಿ ಹಂತ ಹಂತವಾಗಿ 35 ಲಕ್ಷ ಹಣ ಪಡೆದಿದ್ದಾರೆ.

ತಾನು ಪೇಪರ್ ಗ್ಲಾಸ್ ಜ್ಯೂಸ್ ಲೋಟ ಫ್ಯಾಕ್ಟರಿ ಇಟ್ಟಿದ್ದೇನೆ ನಿಮ್ಮನ್ನ ಪಾಲುದಾರರನ್ನಾಗಿ ಮಾಡಿಕೊಳ್ಳುತ್ತೇನೆಂದು ಆಮಿಷವೊಡ್ಡಿ 35 ಲಕ್ಷ ಪಡೆದು ವಂಚಿಸಿದ್ದಾರೆ. ಹಣ ಹಿಂದಿರುಗಿಸುವಂತೆ ಸುಣ್ಣದಕೇರಿ ಮನೆಗೆ ಹೋದಾಗ ಹಣ ಹಿಂದಿರುಗಿಸದೆ ನಾನು ಪೊಲೀಸ್ ಇಲಾಖೆಯಲ್ಲಿದ್ದೇನೆ ಎಂದು ಬೆದರಿಸಿದ್ದಾರೆ.

ಅಲ್ಲದೆ ಪತ್ನಿ ನಂದಿನಿ ರವರು ಮಹಾಲಕ್ಷ್ಮಿ ಮೇಲೆ ಚಾಕುವಿನಿಂದ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾರೆಂದು ದೂರಿನಲ್ಲಿ ದಾಖಲಿಸಲಾಗಿದೆ. ಈ ಹಿಂದೆ ರಾಜು ಕಳ್ಳತನ ಆರೋಪಿಗಳ ಜೊತೆ ಶಾಮೀಲಾಗಿದ್ದಾರೆಂಬ ಆರೋಪದ ಮೇಲೆ ಸಸ್ಪೆಂಡ್ ಆಗಿದ್ದರು. ನಂತರ ಮೇಟಗಳ್ಳಿ ಠಾಣೆಗೆ ನಿಯೋಜನೆಗೊಂಡಿದ್ದರು. ಇದೀಗ ಮತ್ತೆ ವಂಚನೆ ಪ್ರಕರಣವನ್ನ ಮೈಮೇಲೆ ಎಳೆದುಕೊಂಡಿದ್ದಾರೆ. ಇಂತಹ ಸಿಬ್ಬಂದಿಗಳು ಪೊಲೀಸ್ ಇಲಾಖೆಗೆ ಅನಿವಾರ್ಯವೇ…?.