ಗುಂಡ್ಲುಪೇಟೆ : ಗುಂಡ್ಲುಪೇಟೆ ಪಟ್ಟಣದಲ್ಲಿ ಡಿ 27 ರಂದು ನಡೆದ ಹನುಮ ಜಯಂತಿ ಆಚರಣೆ ಸಮಿತಿ ಸದಸ್ಯರ ವಿರುದ್ಧ ಪೊಲೀಸ್ ಇಲಾಖೆ ದುರುದ್ದೇಶಪೂರಕವಾಗಿ ಎಫ್ ಐ ಆರ್ ದಾಖಲಿಸಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಲಾಗುತ್ತಿದೆ.
ಬಿಜೆಪಿ ಚಾಮರಾಜನಗರ ಜಿಲ್ಲಾಧ್ಯಕ್ಷ , ಮಾಜಿ ಶಾಸಕ ನಿರಂಜನ್ ಕುಮಾರ್ ನೇತೃತ್ವದಲ್ಲಿ ಪಟ್ಟಣದ ಹನುಮಾನ್ ದೇವಸ್ಥಾನದ ಮುಂಭಾಗದಿಂದ ಹೊರಟ ಪ್ರತಿಭಟನಕಾರರನ್ನ ಬಸವೇಶ್ವರ ವೃತ್ತದ ಬಳಿ ತಡೆದ ಪೊಲೀಸರು ಮತ್ತು ಹನುಮ ಭಕ್ತರ ನಡುವೆ ಮಾತಿನ ಚಮಮಕಿ ನಡೆಯಿತು.
ಆರಕ್ಷಕ ಠಾಣಾ ಮುಂಭಾಗವೇ ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಿದ್ದ ಹನುಮ ಭಕ್ತರಿಗೆ ಪ್ರವೇಶವಕಾಶ ನಿರಾಕರಿಸಿದ ಪೊಲೀಸರು ಕೆ ಎಸ್ ಆರ್ಟಿಸಿ ಬಸ್ ನಿಲ್ದಾಣದ ವೃತ್ತದಿಂದ ವಾಪಾಸ್ ಕಳುಹಿಸಿದ ಹಿನ್ನೆಲೆ ತಹಸೀಲ್ದಾರ್ ಕಚೇರಿ ಮುಂಭಾಗ ಜಮಾಯಿಸಿರುವ ಸಮಿತಿ ಸದಸ್ಯರು ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ದಿಕ್ಕಾರದ ಘೋಷಣೆಗಳನ್ನ ಕೂಗಿದರು.
ಹನುಮ ಭಕ್ತರ ಮೇಲೆ ದುರುದ್ದೇಶಪೂರಕ ಕೇಸ್ ದಾಖಲಿಸಲು ಕಾರಣರಾದ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು , ಗಂಭೀರ ವಿಚಾರವಾಗಿರುವುದರಿಂದ ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸ್ಥಳಕ್ಕಾಗಮಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ.

