ಮೈಸೂರು : ಜಮೀನು ವಿವಾದಲ್ಲಿ ಎರಡು ಕುಟುಂಬಗಳ ನಡುವೆ ಮಾತಿನ ಚಕಮಕಿ ನಡೆದಿದ್ದು, ಕೊಲೆ ಬೆದರಿಕೆ ಹಾಕಿದ 8 ಮಂದಿ ವಿರುದ್ದ ಎಫ್ಐಆರ್ ದಾಖಲಾಗಿದೆ. ಕೈ ಕೈ ಮಿಲಾಯಿಸುವ ಹಂತ ತಲುಪಿದ ಘಟನೆ ಹುಣಸೂರು ತಾಲೂಕು ಕೊಳಘಟ್ಟ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರತ್ನಮ್ಮ ಎಂಬುವರು ದೂರು ನೀಡಿದ್ದು, ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅದೇ ಗ್ರಾಮದ ಸ್ವಾಮಿ, ವಸಂತ, ಅರ್ಜುನ, ಶಾಂತಮ್ಮ, ರವಿ, ಸಿದ್ದರಾಜು, ನಾಗರಾಜು ಹಾಗೂ ಸಿದ್ದಯ್ಯ ಎಂಬುವರ ವಿರುದ್ದ ಪ್ರಕರಣ ದಾಖಲಾಗಿದೆ.
ಕೊಳಘಟ್ಟ ಗ್ರಾಮದ ಸರ್ವೆ ನಂ.73 ರ 4 ಎಕ್ರೆ ಜಮೀನಿನ ವಿಚಾರದಲ್ಲಿ ಗಲಾಟೆ ನಡೆದಿದ್ದು, ರತ್ನಮ್ಮ ಹಾಗೂ ಸ್ವಾಮಿ ಕುಟುಂಬದ ನಡುವೆ ವಿವಾದ ನಡೆದಿದೆ. ಜಮೀನು ಸರ್ವೆ ನಡೆಸುವಂತೆ ರತ್ನಮ್ಮ ಮನವಿ ಮಾಡಿದ್ದರು. ಈ ಹಿನ್ನಲೆ ಪರಿಶೀಲನೆ ನಡೆಸಲು ಗ್ರಾಮ ಲೆಕ್ಕಿಗ ಜಮೀನಿಗೆ ಭೇಟಿ ನೀಡಿದ್ದಾರೆ.
ಈ ವೇಳೆ ಬಂದ ಸ್ವಾಮಿ ಸೇರಿದಂತೆ 8 ಮಂದಿಯಿಂದ ಕ್ಯಾತೆ ನಡೆದಿದೆ. ಜಮೀನು ಪರಿಶೀಲನೆ ನಡೆಸಲು ಬಿಡದೆ ಗಲಾಟೆ ಮಾಡಿದ್ದಾರೆ. ರತ್ನಮ್ಮ ವಿರುದ್ದ ತಿರುಗಿಬಿದ್ದ ಸ್ವಾಮಿ ಕುಟುಂಬದಿಂದ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಲಾಗಿದೆ. ರತ್ನಮ್ಮ ನೆರವಿಗೆ ಬಂದ ಮಗ ವಿಶಾಂತ್ ಮೇಲೆ ಹಲ್ಲೆ ನಡೆಸಲು ಕುಟುಂಬ ಮುಂದಾಗಿದೆ. ಪರಿಶೀಲನೆ ನಡೆಸಲು ಅವಕಾಶ ನೀಡದೆ ಜಟಾಪಟಿ ನಡೆಸಿದ್ದಾರೆ.
ರತ್ನಮ್ಮ ಮಗ ವಿಶಾಂತ್ ಗೆ ಕೊಲೆ ಬೆದರಿಕೆ ಹಾಕಿದ ಆರೋಪ ಕೂಡ ಕೇಳಿಬಂದಿದೆ. ಕೈಗೆ ಸಿಕ್ಕಿದ್ದಲ್ಲಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಬೆದರಿಕೆ ಹಾಕಿದವರ ಮೇಲೆ ಎಫ್ಐಆರ್ ದಾಖಲಾಗಿದೆ.

