ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿಗೆ ಸಜ್ಜಾಗಿರುವ ಗಜಪಡೆಗೆ ಮೂರನೇ ಹಂತದ ಕುಶಾಲತೋಪು ಸಿಡಿಸುವ ತಾಲೀಮು ಯಶಸ್ವಿಯಾಗಿ ನಡೆಯಿತು.
ತಾಲೀಮಿನಲ್ಲಿ 11ಆನೆಗಳು ಹಾಗೂ 46 ಕುದುರೆಗಳು ಭಾಗವಹಿಸಿದ್ದವು. ಏಳು ಪಿರಂಗಿ ಗಾಡಿಗಳ ಮೂಲಕ ಒಟ್ಟು 21 ಬಾರಿ ಭಾರಿ ಕುಶಾಲತೋಪು ಸಿಡಿಸಲಾಯಿತು. ಮೈಸೂರು ನಗರ ಸಶಸ್ತ್ರ ಮೀಸಲು ಪಡೆಯ ಪೊಲೀಸರು ಕುಶಾಲತೋಪು ಸಿಡಿಸುವ ಕಾರ್ಯ ನಿರ್ವಹಿಸಿದರು.
ಅಭಿಮನ್ಯು, ಧನಂಜಯ, ಪ್ರಶಾಂತ, ಸುಗ್ರೀವ, ಶ್ರೀರಾಮ, ಗೋಪಿ, ಮಹೇಂದ್ರ, ಲಕ್ಷ್ಮಿ, ಚೈತ್ರಾ, ರೂಪ ಹಾಗೂ ಕಾವೇರಿ ಆನೆಗಳು ತಾಲೀಮಿನಲ್ಲಿ ಪಾಲ್ಗೊಂಡಿದ್ದವು. ಅರಮನೆಯ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಏಕಲವ್ಯ ಮತ್ತು ಶ್ರೀಕಂಠ ಆನೆಗಳು ಗೈರಾಗಿದ್ದವು.
ಕುಶಾಲತೋಪಿನ ಭಾರಿ ಸದ್ದಿಗೂ ಆನೆಗಳು ಹಾಗೂ ಕುದುರೆಗಳು ಬೆದರದೆ ಶಾಂತವಾಗಿ ನಿಂತು ತಾಲೀಮು ಪೂರ್ಣಗೊಳಿಸಿದವು. ಈ ಮೂಲಕ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲು ಗಜಪಡೆ ಹಾಗೂ ಅಶ್ವಪಡೆ ಸನ್ನದ್ಧವಾಗಿರುವುದನ್ನು ಸಾಬೀತುಪಡಿಸಿವೆ.

