ನಂಜನಗೂಡು: ಮುಖ್ಯಮಂತ್ರಿ ಸಿದ್ದರಾಮಯ್ಯರವರ ತವರು ಜಿಲ್ಲೆಯಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಜಗುಲಿಯಲ್ಲಿಯೇ ಪಾಠ ಪ್ರವಚನ ಮಾಡಲಾಗುತ್ತಿತ್ತು. ಮಕ್ಕಳಿಗೆ ಇದೆಂಥಾ ಭಾಗ್ಯ ಎಂದು ಪ್ರಶ್ನೆ ವ್ಯಕ್ತವಾಗಿತ್ತು. ನಂಜನಗೂಡು ತಾಲ್ಲೂಕಿನ ದೊಡ್ಡಕವಲಂದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹರಗನಪುರ ಮತ್ತು ಹೆಳವರಹುಂಡಿ ಗ್ರಾಮಗಳ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕೊಠಡಿಗಳ ಸಮಸ್ಯೆಯಿಂದಾಗಿ ಶಾಲಾ ಮಕ್ಕಳನ್ನು ನೆಲದಲ್ಲಿ ಕೂರಿಸಿ ಪಾಠ ಪ್ರವಚನ ಮಾಡಲಾಗುತ್ತಿತ್ತು.
ಈ ಬಗ್ಗೆ ನಿಮ್ಮ ನ್ಯೂಸ್ ಕರ್ನಾಟಕ ಸುದ್ದಿ ವಾಹಿನಿಯಲ್ಲಿ ವರದಿಯನ್ನು ಪ್ರಸಾರ ಮಾಡಲಾಗಿತ್ತು. ಇದರಿಂದ ಎಚ್ಚೆತ್ತುಕೊಂಡ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕ್ರಮಕ್ಕೆ ಮುಂದಾಗಿದ್ದಾರೆ. ಶಾಸಕ ದರ್ಶನ್ ಧ್ರುವನಾರಾಯಣ್ ಪ್ರತಿಕ್ರಿಯೆ ನೀಡಿದ್ದಾರೆ. ಹರಗನಪುರ ಗ್ರಾಮದ ಸರ್ಕಾರಿ ಶಾಲೆಗೆ ಹೆಚ್ಚುವರಿ ಕಟ್ಟಡ ನೀಡುವಂತೆ ಈಗಾಗಲೇ ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದೇವೆ ಎಂದು ತಿಳಿಸಿದ್ದಾರೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಹರಗನಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಮಹೇಶ್ ಶಾಲೆಗೆ ಭೇಟಿ ನೀಡಿ ಸಮಸ್ಯೆಯನ್ನು ಆಲಿಸಿದ್ದಾರೆ.

ಒಂದರಿಂದ ಐದನೇ ತರಗತಿಯವರೆಗೆ ಸುಮಾರು 25ಕ್ಕೂ ಹೆಚ್ಚು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಕೇವಲ ಒಂದೇ ಕಟ್ಟಡದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಮಕ್ಕಳನ್ನು ಜಗುಲಿಯಲ್ಲಿ ಕೂರಿಸಿಕೊಂಡು ಪಾಠ ಮಾಡಬಾರದು. ಇರುವ ಒಂದೇ ಕೊಠಡಿಯಲ್ಲಿ ಎಲ್ಲಾ ಮಕ್ಕಳನ್ನು ಕೂರಿಸಿಕೊಂಡು ಪಾಠ ಮಾಡುವಂತೆ ಶಿಕ್ಷಕರಿಗೆ ಸೂಚಿಸಿದ ಅವರು, ಹೆಚ್ಚುವರಿ ಕಟ್ಟಡವನ್ನು ನಿರ್ಮಾಣ ಮಾಡಿಕೊಡಲು ಗ್ರಾಮದಲ್ಲಿ ಜಾಗದ ಸಮಸ್ಯೆ ಇದೆ.
ಹಳೆಯ ಸರ್ಕಾರಿ ಶಾಲೆ ಕಟ್ಟಡವು ದುರಸ್ತಿಯಾಗಿರುವುದರಿಂದ ಅದನ್ನು ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಾಣ ಮಾಡಿಕೊಡುವಂತೆ ಸರ್ಕಾರಕ್ಕೆ ವರದಿ ಕಳಿಸುತ್ತೇವೆ. ಆದಷ್ಟು ಬೇಗ ಹೆಚ್ಚುವರಿ ಕಟ್ಟಡ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಮಹೇಶ್ ತಿಳಿಸಿದ್ದಾರೆ. ಇದು ನ್ಯೂಸ್ ಕರ್ನಾಟಕ ವರದಿಯ ಬಿಗ್ ಇಂಪ್ಯಾಕ್ಟ್ ಆಗಿದೆ. ನ್ಯೂಸ್ ಕರ್ನಾಟಕ ವಾಹಿನಿಯ ಜನಪರ ಕಾಳಜಿಗೆ ಗ್ರಾಮಸ್ಥರು ಪ್ರಸಂಶೆ ವ್ಯಕ್ತಪಡಿಸಿದ್ದಾರೆ.

