ನಂಜನಗೂಡು: ತಾಲ್ಲೂಕಿನ ಚುಂಚನಹಳ್ಳಿ ಗ್ರಾಮದ ಖಾಸಗಿ ಜಮೀನಿನಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಎರಡು ವರ್ಷದ ಹೆಣ್ಣು ಚಿರತೆಯೊಂದು ಸೆರೆಯಾಗಿದೆ.
ಚುಂಚನಹಳ್ಳಿ ಸೇರಿದಂತೆ ಕೋಣನೂರು, ಹನುಮನಪುರ, ಪಿ.ಮರಹಳ್ಳಿ ಹಾಗೂ ದಾಸನೂರು ಸುತ್ತಮುತ್ತಲಿನ ಗ್ರಾಮಗಳಲ್ಲಿ ಹಲವು ದಿನಗಳಿಂದ ಚಿರತೆಗಳ ಹಾವಳಿ ಹೆಚ್ಚಾಗಿತ್ತು. ಜಾನುವಾರುಗಳ ಮೇಲೆ ಚಿರತೆಗಳು ದಾಳಿ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ರೈತರು ಹಾಗೂ ಗ್ರಾಮಸ್ಥರು ಆತಂಕದಲ್ಲಿದ್ದರು. ಜಮೀನುಗಳಿಗೆ ತೆರಳಲು ಹಾಗೂ ಜಾನುವಾರುಗಳನ್ನು ಮೇಯಿಸಲು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಚಿರತೆಗಳ ಹಾವಳಿ ನಿಯಂತ್ರಿಸುವಂತೆ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಚುಂಚನಹಳ್ಳಿ ಗ್ರಾಮದ ಖಾಸಗಿ ಜಮೀನಿನಲ್ಲಿ ಬೋನು ಅಳವಡಿಸಿ, ಅದರಲ್ಲಿ ನಾಯಿಯನ್ನು ಕಟ್ಟಿದ್ದರು. ಆಹಾರಕ್ಕಾಗಿ ಬಂದ ಚಿರತೆ ಬೋನಿಗೆ ಸಿಲುಕಿಕೊಂಡಿದೆ.
ಇನ್ನೂ ಮೂರು-ನಾಲ್ಕು ಚಿರತೆಗಳು ಈ ಭಾಗದಲ್ಲಿ ಸಂಚರಿಸುತ್ತಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದು, ಅವುಗಳನ್ನು ಕೂಡಲೇ ಸೆರೆಹಿಡಿದು ಜನರು ಹಾಗೂ ಜಾನುವಾರುಗಳ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

