ಮೈಸೂರು: ಡಿಜಿಟಲ್ ಅರೆಸ್ಟ್ ಮಾಡಿರುವುದಾಗಿ ಬೆದರಿಸಿದ ವಂಚಕರು ನಿವೃತ್ತ ಅಧಿಕಾರಿಯೊಬ್ಬರಿಗೆ 45.98 ಲಕ್ಷ ವಂಚಿಸಿರುವ ಪ್ರಕರಣ ಸೆನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ವಿಜಯನಗರ ಎರಡನೇ ಹಂತದ ಪಾಂಡುರಂಗರಾವ್ ಎಂಬುವರೇ ಹಣ ಕಳೆದುಕೊಂಡವರು.ಮುಂಬೈ ಆಧಾರ್ ಕಚೇರಿಯಿಂದ ಫೋನ್ ಮಾಡಿರುವುದಾಗಿ ನಂಬಿಸಿದ ವಂಚಕರು ಆಧಾರ್ ನಂಬರ್ ದುರುಪಯೋಗವಾಗಿದೆ ಎಂದು ಭೀತಿ ಹುಟ್ಟಿಸಿದ್ದಾರೆ.

ನಂತರ ಕರೆಯನ್ನ ಸೈಬರ್ ಬ್ರಾಂಚ್ ಗೆ ವರ್ಗಾಯಿಸಿದ್ದಾರೆ. ಇನ್ಸ್ಪೆಕ್ಟರ್ ಕುಲದೀಪ್ ಯಾದವ್ ಎಂದು ಪರಿಚಯಿಸಿಕೊಂಡ ವ್ಯಕ್ತಿ ವಾಟ್ಸಪ್ ನಲ್ಲಿ ವಿಡಿಯೋ ಕರೆಯಲ್ಲಿ ಮಾತನಾಡಿ ಎರಡು ಬ್ಯಾಂಕ್ ಗಳಲ್ಲಿ ನಿಮ್ಮ ಹೆಸರಲ್ಲಿ ಖಾತೆ ತೆರೆದು 3 ಕೋಟಿಗೂ ಅಧಿಕ ಹಣ ಬ್ಯಾಲೆನ್ಸ್ ಇದೆ ನಿಮ್ಮ ಖಾತೆಗಳನ್ನ ಪರಿಶೀಲಿಸಬೇಕೆಂದು ಡಿಜಿಟಲ್ ಅರೆಸ್ಟ್ ಮಾಡಿರುವುದಾಗಿ ಬೆದರಿಸಿದ್ದಾರೆ.

ಮೂರು ದಿನಗಳಲ್ಲಿ ಹಣ ನಿಮ್ಮ ಖಾತೆಗೆ ಹಿಂದಿರುಗಿ ಬರಲಿದೆ ಎಂದು ವಂಚಕರು ನಂಬಿಕೆ ಹುಟ್ಟಿಸಿದ್ದಾರೆ. ವಂಚಕರ ಮಾತುಗಳನ್ನ ನಂಬಿ ಪಾಂಡುರಂಗರಾವ್ ರವರು 45.98 ಲಕ್ಷ ಹಣ ವರ್ಗಾವಣೆ ಮಾಡಿದ್ದಾರೆ. ಮೂರು ದಿನಗಳ ನಂತರ ಹಣ ವಾಪಸ್ ಬಾರದಿದ್ದಾಗ ತಾವು ಮೋಸ ಹೋಗಿರುವುದಾಗಿ ಖಚಿತವಾಗಿದೆ. ಈ ಕುರಿತಂತೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.