ನಂಜನಗೂಡು: ಮುಖ್ಯಮಂತ್ರಿ ಸಿದ್ದರಾಮಯ್ಯರವರ ಕ್ಷೇತ್ರದಲ್ಲಿ ರೈತರು ಸರ್ಕಾರ ಮತ್ತು ತಾಲ್ಲೂಕು ಆಡಳಿತದ ವಿರುದ್ಧ ಸಿಡಿದೆದಿದ್ದಾರೆ. ರೈತನ ಅಣುಕು ಶವ ಇಟ್ಟು ರೈತರು ಕಣ್ಣೀರಿಡುವ ಮೂಲಕ ಪ್ರತಿಭಟಿಸಿದರು. ನಂಜನಗೂಡಿನಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ವತಿಯಿಂದ ತಾಲ್ಲೂಕು ಆಡಳಿತದ ವಿರುದ್ಧ ಬೃಹತ್ ಬಾರುಕೋಲು ಚಳುವಳಿಯನ್ನು ನಡೆಸಲಾಗುತ್ತಿದೆ.
ನಂಜನಗೂಡು ನಗರದ ಡಾ. ಬಿ.ಆರ್ ಅಂಬೇಡ್ಕರ್ ಪ್ರತಿಮೆ ಮುಂಭಾಗದಲ್ಲಿ ಜಮಾಯಿಸಿದ ನೂರಾರು ರೈತರು ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಪಟ್ಟಣದ ರಾಷ್ಟ್ರಪತಿ ರಸ್ತೆಯ ಮೂಲಕ ತಾಲ್ಲೂಕು ಆಡಳಿತ ಭವನದವರೆಗೆ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಟಿ.ಆರ್ ವಿದ್ಯಾಸಾಗರ್ ನೇತೃತ್ವದಲ್ಲಿ ಬೃಹತ್ ಕಾಲ್ನಡಿಗೆ ಜಾಥವನ್ನು ನಡೆಸಿ ಜಿಲ್ಲಾ ಮತ್ತು ತಾಲ್ಲೂಕು ಆಡಳಿತ ಮತ್ತು ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ತಾಲ್ಲೂಕು ಆಡಳಿತ ನಿಷ್ಕ್ರಿಯಗೊಂಡಿದೆ. ಸಾರ್ವಜನಿಕರ ಮತ್ತು ರೈತರ ಕೆಲಸ ಕಾರ್ಯಗಳು ಆಗುತ್ತಿಲ್ಲ. ತಾಲ್ಲೂಕು ಕಛೇರಿಯಲ್ಲಿ ಲಂಚ ತಾಂಡವಾಡುತ್ತಿದೆ. ಮುಖ್ಯಮಂತ್ರಿಗಳ ಕ್ಷೇತ್ರದಲ್ಲಿ ಸರಿಯಾಗಿ ಕೆಲಸಗಳು ಆಗುತ್ತಿಲ್ಲ. ಇನ್ನುಳಿದ ಕ್ಷೇತ್ರಗಳ ಗತಿಯೇನು. ಕಛೇರಿಯಲ್ಲಿ ತಹಶೀಲ್ದಾರ್ ಸಿಗುವುದೇ ಇಲ್ಲ. ಕೂಡಲೆ ತಹಶೀಲ್ದಾರ್ ಅವರನ್ನು ತಾಲ್ಲೂಕಿನಿಂದ ಗೇಟ್ ಪಾಸ್ ನೀಡಬೇಕು.
ದಕ್ಷ ಅಧಿಕಾರಿಯನ್ನು ನೇಮಕ ಮಾಡಬೇಕು. ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಮತ್ತು ಕಮಿಷನರ್ ಬರುವ ತನಕ ಹೋರಾಟ ನಿಲ್ಲುವುದಿಲ್ಲ. ಮೈಸೂರು- ಊಟಿ ರಾಷ್ಟ್ರೀಯ ಹೆದ್ದಾರಿಯನ್ನು ಬಂದು ಮಾಡಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಟಿ.ಆರ್. ವಿದ್ಯಾಸಾಗರ್ ಎಚ್ಚರಿಕೆ ನೀಡಿದ್ದಾರೆ.
ಪ್ರತಿಭಟನೆಯಲ್ಲಿ ತಾಲ್ಲೂಕು ಅಧ್ಯಕ್ಷ ಸತೀಶ್ ರಾವ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಮ್ಮಾವು ರಘು, ಕೃಷ್ಣಾಪುರ ಮೋಹನ್, ಹೆಡತಲೆ ಶಂಕರನಾಯಕ, ರಂಗಸ್ವಾಮಿ ನಾಯಕ, ಮಹದೇವನಾಯಕ, ಶ್ವೇತಾ, ಶಿವಣ್ಣ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ರೈತರು ಭಾಗವಹಿಸಿದ್ದರು.

