ನಂಜನಗೂಡು: ಪೂರ್ವಜರ ಕಾಲದಿಂದಲೂ ಕೃಷಿ ಮಾಡಿ ಬದುಕು ಸಾಗಿಸುವ ನಮ್ಮ ಕೃಷಿ ಭೂಮಿಗೆ ದರ ನಿಗದಿ ಮಾಡಲು ನೀವ್ಯಾರು ನಮ್ಮಗಳ ಅನುಮತಿ ಇಲ್ಲದೆ ನಮ್ಮ ಭೂಮಿಯ ಬಳಿ ಕಾಲಿಟ್ಟರೆ ನಿಮಗೆ ತಕ್ಕ ಪಾಠ ಕಲಿಸಲಾಗುತ್ತದೆ ಎಂದು ಕೆಐಡಿಬಿ ಅಧಿಕಾರಿಗಳಿಗೆ ರೈತರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.

ನಂಜನಗೂಡು ಪಟ್ಟಣದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಮೈಸೂರಿನ ಕೆಐಡಿಬಿ ಜಿಲ್ಲಾ ಮಟ್ಟದ ಅಧಿಕಾರಿ ದಯಾನಂದ್ ಭಂಡಾರಿ ನೇತೃತ್ವದಲ್ಲಿ ರೈತರು ಮತ್ತು ಅಧಿಕಾರಿಗಳ ಸಭೆಯನ್ನು ಆಯೋಜನೆ ಮಾಡಲಾಗಿತ್ತು.

ಸಿಂಧುವಳ್ಳಿಪುರ, ಏಲಚಗೆರೆ, ಮುದ್ದಹಳ್ಳಿ ಗ್ರಾಮಗಳ ಸುತ್ತಮುತ್ತ ಸರಿಸುಮಾರು 450 ಎಕರೆ ಪ್ರದೇಶದಲ್ಲಿರುವ ರೈತರ ಕೃಷಿ ಭೂಮಿಯನ್ನು ಕೆಐಡಿಬಿ ಅಧಿಕಾರಿಗಳು ಭೂ ಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿದ್ದರು. ಕಳೆದ ಐದಾರು ವರ್ಷಗಳಿಂದಲೂ ಕೂಡ ಕೆಐಡಿಬಿ ಇಲಾಖೆಯ ಮಟ್ಟದಲ್ಲಿ ಎಲ್ಲಾ ರೀತಿಯ ಸಿದ್ಧತೆ ಕಾರ್ಯಗಳನ್ನು ನಡೆಸಲಾಗಿದೆ. ರೈತರು ಮತ್ತು ಅಧಿಕಾರಿಗಳ ಸಮ್ಮುಖದಲ್ಲಿ ರೈತರ ಭೂಮಿಗೆ ದರ ನಿಗದಿ ಮಾಡಲು ಸಭೆ ಆಯೋಜನೆ ಮಾಡಲಾಗಿತ್ತು.

ಕೆಐಡಿಬಿ ಅಧಿಕಾರಿಗಳು ಒಂದು ಎಕರೆಯ ರೈತರ ಕೃಷಿ ಭೂಮಿಗೆ 75 ಲಕ್ಷ ರೂಗಳನ್ನು ನಿಗದಿ ಮಾಡಲು ಮುಂದಾದರು. ಇದರಿಂದ ಆಕ್ರೋಶ ವ್ಯಕ್ತಪಡಿಸಿದ ರೈತರು ನಮ್ಮ ಭೂಮಿಯನ್ನು ನಾವು ಯಾವುದೇ ಕಾರಣಕ್ಕೂ ಬಿಟ್ಟು ಕೊಡುವುದಿಲ್ಲ. ನಮ್ಮ ಅನುಮತಿ ಇಲ್ಲದೆ ನಮ್ಮ ಭೂಮಿಯ ಬಳಿ ಕಾಲಿಡಬೇಡಿ ಎಂದು ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕೆಲ ಕಾಲ ಗೊಂದಲದ ವಾತಾವರಣವು ಕೂಡ ನಿರ್ಮಾಣವಾಗಿ ರೈತರ ಮತ್ತು ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು.

ಸಭೆಯಲ್ಲಿ ಹಾಜರಿದ್ದ ಶೇ. 80ರಷ್ಟು ರೈತರು ಕೆಐಡಿಬಿ ಅಧಿಕಾರಿಗಳ ಭೂ ಸ್ವಾಧೀನಕ್ಕೆ ವಿರೋಧ ವ್ಯಕ್ತಪಡಿಸಿದರು‌. ಕೇವಲ 20ರಷ್ಟು ರೈತರು ಗೊಂದಲಕ್ಕೆ ಒಳಗಾಗಿದ್ದರು. ಈಗಾಗಲೇ ಕೆಐಡಿಬಿ ಅಧಿಕಾರಿಗಳು ರೈತರ ಭೂಮಿಯನ್ನು ಭೂಸ್ವಾಧೀನ ಮಾಡಿಕೊಂಡು ಎಷ್ಟು ರೈತರ ಮಕ್ಕಳಿಗೆ ಉದ್ಯೋಗ ನೀಡಿದ್ದೀರಿ ಎಂದು ಸಾಕಷ್ಟು ಪ್ರಶ್ನೆಗಳನ್ನ ಸುರಿಮಳೆಗೈದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ರೈತರ ಆಕ್ರೋಶವನ್ನು ನೋಡಿದ ಕೆಐಡಿಬಿ ಅಧಿಕಾರಿಗಳು ಬಂದ ದಾರಿಗೆ ಸುಂಕವಿಲ್ಲದಂತೆ ಸಭೆಯನ್ನು ಸ್ಥಗಿತಗೊಳಿಸಿ ಸ್ಥಳದಿಂದ ಕಾಲ್ಕಿತ್ತರು. ಸಭೆಯಲ್ಲಿ ನಂಜನಗೂಡಿನ ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು, ಉಪ ನೋಂದಣಾಧಿಕಾರಿ ವಿವೇಕ್, ಸಿಂಧುವಳ್ಳಿಪುರ ಏಲಚಗೆರೆ, ಮುದ್ದಹಳ್ಳಿ ಗ್ರಾಮಗಳ ರೈತರು ಹಾಜರಿದ್ದರು.