ನಂಜನಗೂಡು: ಕೈಗಾರಿಕಾ ಅಭಿವೃದ್ಧಿಯ ಹೆಸರಿನಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ವತಿಯಿಂದ ನಂಜನಗೂಡು ತಾಲ್ಲೂಕಿನ ಕಸಬಾ ಹೋಬಳಿಯ ಗೀಕಹಳ್ಳಿ ಗ್ರಾಮದ ವ್ಯಾಪ್ತಿಯ ಗೋಳೂರು ಗ್ರಾಮದ ರೈತರ ಜಮೀನುಗಳನ್ನು ಭೂಸ್ವಾಧೀನಪಡಿಸಿಕೊಳ್ಳಲು ಮುಂದಾಗಿರುವುದಕ್ಕೆ ರೈತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
“ನಮ್ಮ ಜಮೀನು ನಮಗೆ ಜೀವನಾಧಾರ. ಯಾವುದೇ ಕಾರಣಕ್ಕೂ ಭೂಮಿಯನ್ನು ಕೆಐಎಡಿಬಿಗೆ ನೀಡುವುದಿಲ್ಲ” ಎಂದು ರೈತರು ಸ್ಪಷ್ಟಪಡಿಸಿದ್ದಾರೆ. ಹಲವು ವರ್ಷಗಳಿಂದ ಕೃಷಿಯನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ನಾವು, ಹಿರಿಯರು ಉಳಿಸಿಕೊಂಡು ಬಂದಿರುವ ಅಲ್ಪಸ್ವಲ್ಪ ಜಮೀನಿನಲ್ಲೇ ಬದುಕು ಕಟ್ಟಿಕೊಂಡಿದ್ದೇವೆ. ಭೂಮಿಯೇ ನಮ್ಮ ಕುಟುಂಬಗಳ ಜೀವನಾಧಾರವಾಗಿದ್ದು, ಅದನ್ನು ಕಸಿದುಕೊಂಡರೆ ನಮ್ಮ ಕುಟುಂಬಗಳು ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ, ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಅಗತ್ಯವಾದ ಮಾಹಿತಿಯನ್ನು ಸರಿಯಾಗಿ ನೀಡದೆ ಏಕಾಏಕಿ ನೋಟಿಸ್ ನೀಡಲಾಗಿದೆ ಎಂದು ರೈತರು ಆರೋಪಿಸಿದ್ದಾರೆ. 30 ದಿನಗಳೊಳಗೆ ಆಕ್ಷೇಪಣೆ ಸಲ್ಲಿಸಬೇಕೆಂದು ನೋಟಿಸ್ನಲ್ಲಿ ತಿಳಿಸಲಾಗಿದ್ದರೂ, ಈಗಾಗಲೇ 26 ದಿನಗಳು ಕಳೆದ ಬಳಿಕ ನೋಟಿಸ್ ನೀಡಲಾಗಿದೆ. ಉಳಿದ ಅವಧಿಯಲ್ಲೂ ಸರ್ಕಾರಿ ರಜೆಗಳು ಎದುರಾಗುವಂತೆ ನೋಟಿಸ್ ನೀಡಿರುವುದು ಆಕ್ಷೇಪಣೆ ಸಲ್ಲಿಸಲು ಅವಕಾಶವನ್ನೇ ಸೀಮಿತಗೊಳಿಸುವ ಪೂರ್ವನಿಯೋಜಿತ ಕ್ರಮದಂತಿದೆ ಎಂದು ರೈತರು ದೂರಿದ್ದಾರೆ.
“ನಮ್ಮ ಬದುಕಿನೊಂದಿಗೆ ಚೆಲ್ಲಾಟವಾಡಬೇಡಿ. ಕೈಗಾರಿಕಾ ಅಭಿವೃದ್ಧಿ ಅಗತ್ಯವಿದ್ದರೂ, ಅದಕ್ಕಾಗಿ ಕೃಷಿಯನ್ನೇ ನಂಬಿಕೊಂಡಿರುವ ರೈತರ ಬದುಕನ್ನು ಬಲಿಕೊಡಬಾರದು. ನಮ್ಮ ಜಮೀನನ್ನು ಸ್ವಾಧೀನಪಡಿಸಿಕೊಳ್ಳುವ ಯಾವುದೇ ಪ್ರಯತ್ನವನ್ನು ನಾವು ಒಪ್ಪುವುದಿಲ್ಲ” ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಂದು ವೇಳೆ ಕೆಐಎಡಿಬಿ ಅಧಿಕಾರಿಗಳು ರೈತರ ಜಮೀನುಗಳನ್ನು ಭೂಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ಮುಂದುವರಿಸಿದರೆ, ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ರೈತ ಮುಖಂಡರಾದ ಗೋಳೂರು ನಾರಾಯಣಸ್ವಾಮಿ, ಮುದ್ದು ಮಾದಶೆಟ್ಟಿ, ಸಿದ್ದರಾಜು, ಉಮೇಶ್, ಮೂರ್ತಿ, ಹಳಕೋಟಯ್ಯ, ಕೃಷ್ಣ, ಶ್ರೀನಿವಾಸ್ ಸೇರಿದಂತೆ ರೈತರು ಎಚ್ಚರಿಕೆ ನೀಡಿದ್ದಾರೆ.

