ನಂಜನಗೂಡು: ರೈತರ ಕೆಲಸಗಳನ್ನು ವಿಳಂಬ ಮಾಡುತ್ತಿರುವ ತಾಲ್ಲೂಕು ಆಡಳಿತದ ಅಧಿಕಾರಿಗಳ ವಿರುದ್ಧ ರೊಚ್ಚಿಗೆದ್ದು ರೈತ ಸಂಘ ಮತ್ತು ಹಸಿರು ಸೇನೆಯ ರೈತರು ತಾಲ್ಲೂಕು ಕಚೇರಿಯ ಒಳ ಆವರಣದಲ್ಲಿ ಮಲಗಿ ನಿದ್ರಿಸುವ ಮೂಲಕ ದಿಡೀರ್ ಪ್ರತಿಭಟನೆ ನಡೆಸಿದರು.
ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾಧ್ಯಕ್ಷ ವಿದ್ಯಾಸಾಗರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದ್ದು, ತಾಲ್ಲೂಕು ಆಡಳಿತದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗುತ್ತ ಆಕ್ರೋಶ ವ್ಯಕ್ತಪಡಿಸಿದರು.
ತಾಲ್ಲೂಕು ಕಚೇರಿಯಲ್ಲಿ ರೈತರು ಮತ್ತು ಸಾರ್ವಜನಿಕರ ಕೆಲಸ ಕಾರ್ಯಗಳು ನಡೆಯುತ್ತಿಲ್ಲ. ರೈತರ ಕೆಲಸಗಳನ್ನು ವಿಳಂಬ ಮಾಡುತ್ತಿದ್ದಾರೆ. ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ತಹಶೀಲ್ದಾರ್ ರವರು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ.
ತಾಲ್ಲೂಕು ಆಡಳಿತ ತುಕ್ಕು ಹಿಡಿದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯರವರ ಕ್ಷೇತ್ರದಲ್ಲಿ ಯಾವುದೇ ಕೆಲಸಗಳು ಆಗುತ್ತಿಲ್ಲ. ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಮಾಡದಿದ್ದರೆ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾಧ್ಯಕ್ಷ ವಿದ್ಯಾಸಾಗರ್ ಎಚ್ಚರಿಕೆ ನೀಡಿದ್ದಾರೆ.

