ನಂಜನಗೂಡು: ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಭತ್ತ ಖರೀದಿ ಕೇಂದ್ರಗಳನ್ನು ತೆರೆಯುವಂತೆ ಒತ್ತಾಯಿಸಿ ನಂಜನಗೂಡಿನಲ್ಲಿ ಕರ್ನಾಟಕ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಹಳ್ಳಿ ಕೆರೆಹುಂಡಿ ಭಾಗ್ಯರಾಜ್ ನೇತ್ರತ್ವದಲ್ಲಿ ನಂಜನಗೂಡು ನಗರದ ಹುಲ್ಲಹಳ್ಳಿ ಜಮಾಯಿಸಿದ ರೈತರು, ಮೈಸೂರು ಮತ್ತು ಊಟಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಎತ್ತಿನ ಗಾಡಿ ನಿಲ್ಲಿಸಿ, ಹೆದ್ದರಿಯನ್ನು ತಡೆದು ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರಿಗೆ ಬೆಂಬಲ ಬೆಲೆ ಘೋಷಣೆ ಮಾಡುವಲ್ಲಿ ವಿಫಲವಾಗಿವೆ. ತಕ್ಷಣವೇ ಭತ್ತ ಖರೀದಿ ಕೇಂದ್ರವನ್ನು ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ತೆರೆಯಬೇಕು.

ಪ್ರತಿ ಕ್ವಿಂಟಲ್ ಭತ್ತಕ್ಕೆ 500 ಹೆಚ್ಚುವರಿ ದರ ನಿಗದಿ ಮಾಡಿ ನೋಂದಣಿ ಪ್ರಕ್ರಿಯೆ ಪ್ರಾರಂಭಿಸಬೇಕು. ರೈತರು ಬೆಳೆದ ಭತ್ತದ ಬೆಳೆಯನ್ನು ಖರೀದಿ ಕೇಂದ್ರದ ಮೂಲಕವೇ ಖರೀದಿ ಮಾಡಬೇಕು. ಕೂಡಲೇ ಕೃಷಿ ಮತ್ತು ಕಂದಾಯ ಇಲಾಖೆಯ ಜಂಟಿ ಸಮಿತಿಯನ್ನು ರಚನೆ ಮಾಡಬೇಕು.

ಮಹಾರಾಷ್ಟ್ರ ಮಾದರಿಯಲ್ಲಿ ರಾಜ್ಯದಲ್ಲೂ ಕಬ್ಬು ಬೆಳೆಗಾರರಿಗೆ ಎಫ್ಆರ್‌ಪಿ ಗಿಂತ ಹೆಚ್ಚುವರಿ ಹಣ ನೀಡಬೇಕು. ಬಣ್ಣಾರಿ ಅಮ್ಮಾನ್ ಸಕ್ಕರೆ ಕಾರ್ಖಾನೆ ವ್ಯಾಪ್ತಿಯಲ್ಲಿ ಕಟಾವು ಮತ್ತು ಸಾಗಾಣಿಕೆಯನ್ನು ಬಿಟ್ಟು 2900 ರೂ.ಗಳನ್ನು ರೈತರ ಖಾತೆಗೆ ಜಮಾ ಮಾಡಬೇಕು. ಉತ್ತರ ಕರ್ನಾಟಕದ ಸಕ್ಕರೆ ಕಾರ್ಖಾನೆಗಳಿಗೆ ನಿರ್ಧಾರ ಮಾಡಿರುವ ರೀತಿ ದಕ್ಷಿಣ ಕರ್ನಾಟಕದ ಕಾರ್ಖಾನೆಗಳಿಗೂ ಕಟಾವು ಸಾಗಾಣಿಕೆಯನ್ನು ಬಿಟ್ಟು ಹಣ ಪಾವತಿಗೆ ಸರ್ಕಾರ ಆದೇಶ ನೀಡಬೇಕು.

ಸಕ್ಕರೆ ಕಾರ್ಖಾನೆಗಳ ಮುಂದೆ ತೂಕದ ಯಂತ್ರ, ಹಾಗೂ ರೈತರ ಕಬ್ಬಿಣ ಇಳುವರಿ ಪರೀಕ್ಷಿಸಲು ಲ್ಯಾಬ್ ಲಾಭ ಅಳವಡಿಸಬೇಕು ಎಂದು ಒತ್ತಾಯಿಸಿದರು. ಕಾಡುಪ್ರಾಣಿ ಮತ್ತು ಹುಲಿ ದಾಳಿಗೆ ಬಲಿಯಾದ ರೈತ ಕುಟುಂಬಕ್ಕೆ ಒಂದು ಕೋಟಿ ರೂ.ನಷ್ಟ ಪರಿಹಾರವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಘೋಷಣೆ ಮಾಡಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ರಾಜ್ಯಾದ್ಯಂತ ಆಹೋರಾತ್ರಿ ಧರಣಿ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.‌

ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಕಸುವಿನಹಳ್ಳಿ ಜಿ. ಮಂಜೇಶ್ ಕುಮಾರ್, ಕೆರೆ ಹುಂಡಿ ರಾಜಣ್ಣ, ಮುದ್ದಹಳ್ಳಿ ಕುಮಾರ್, ಹಂಡುವಿನಹಳ್ಳಿ ರಾಜಣ್ಣ, ಮಧು, ಮಹೇಶ್, ಸಿದ್ದಲಿಂಗಪ್ಪ, ಜಗದೀಶ್, ವಳಗೆರೆ ಗಣೇಶ್, ದೇವನೂರು ನಾಗೇಂದ್ರ ಸೇರಿದಂತೆ ರೈತರು ಹಾಜರಿದ್ದರು.

ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಪ್ರತಿಭಟನೆ ಮಾಡುತ್ತಿದ್ದ ರೈತರನ್ನು ತಡೆಯಲು ಮುಂದಾದ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದ್ದು, ಪೊಲೀಸರ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾಪ್ರಭುತ್ವದಲ್ಲಿ ಮತ ಹಾಕಿದ್ದೇವೆ. ನಾವು ನಮ್ಮ ಹಕ್ಕುಗಳನ್ನು ಕೇಳಲು ಬಂದಿದ್ದೇವೆ. ರಾಜಕಾರಣಿಗಳು ಬರುವಾಗ ಹೆದ್ದಾರಿಗಳನ್ನು ಬಂದ್ ಮಾಡುತ್ತೀರಿ, ನಾವು ನಮ್ಮ ಹಕ್ಕುಗಳನ್ನು ಕೇಳಲು ಬಂದ್ ಮಾಡಿದರೆ ಕೇಳುತ್ತಿದ್ದೀರಿ, 140 ಎಂಎಲ್ಎಗಳು, 180 ಎಂಪಿಗಳು ರೌಡಿಗಳಿದ್ದಾರೆ. ಬೇಲ್ ಮೇಲೆ ಹೊರಗಡೆ ಬಂದಿದ್ದಾರೆ ಅವರ ಮೇಲೆ ಕೇಸ್ ದಾಖಲು ಮಾಡಿ ನಮ್ಮ ಮೇಲೆಲ್ಲ. ನಮಗೆ ಬೆದರಿಕೆ ಹಾಕುತ್ತಿದ್ದೀರಾ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು.