ನಂಜನಗೂಡು: ತಾಲ್ಲೂಕಿನ ಇಮ್ಮಾವು ಗ್ರಾಮದ ಬಳಿ ಚಿತ್ರ ನಗರಿ ನಿರ್ಮಾಣಕ್ಕೆ ಭೂಸ್ವಾಧೀನ ಪಡಿಸಿಕೊಂಡಿರುವ ರೈತರಿಗೆ ತಾಲ್ಲೂಕು ಆಡಳಿತ  ಪರಿಹಾರ ವಿತರಣೆ ಸಂದರ್ಭದಲ್ಲಿ ಅನ್ಯಾಯವಾಗಿದೆ ಎಂದು ಆಗ್ರಹಿಸಿ ಸುತ್ತಲಿನ ರೈತರು ಶನಿವಾರ ಪ್ರತಿಭಟನೆ ನಡೆಸಿದರು.

ನಂಜನಗೂಡು ತಾಲ್ಲೂಕಿನ ಇಮ್ಮಾವು, ಇಮ್ಮಾವುಹುಂಡಿ, ಅಡಕನಹಳ್ಳಿಹುಂಡಿ, ಆಯರಹಳ್ಳಿ, ಹುಳಿಮಾವು, ಕೋಚನಹಳ್ಳಿ ಗ್ರಾಮದ ನೂರಾರು ರೈತರು ಉದ್ದೇಶಿತ ಚಿತ್ರನಗರಿ ಸ್ಥಳಕ್ಕೆ ಟ್ರ್ಯಾಕ್ಟರ್, ಎತ್ತುಗಳೊಂದಿಗೆ ಆಗಮಿಸಿ ಉಳುಮೆ ಮಾಡಿ, ಜೋಳ ಮತ್ತು ಹುರುಳಿ ಬಿತ್ತುವ ಮೂಲಕ ಸರ್ಕಾರಕ್ಕೆ ಪರೋಕ್ಷವಾಗಿ ಎಚ್ಚರಿಕೆ ನೀಡಿದರು. ಬಳಿಕ ಜಿಲ್ಲಾಡಳಿತ, ತಾಲ್ಲೂಕು ಆಡಳಿತ ವಿರುದ್ಧ ದಿಕ್ಕಾರ  ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಕರ್ನಾಟಕ ರಾಜ್ಯ ರೈತ ಸಂಘದ ವಿಭಾಗಿಯ ಸಂಘಟನೆ ಕಾರ್ಯದರ್ಶಿ ಹೊಸಕೋಟೆ ಬಸವರಾಜ್ ಮಾತನಾಡಿ, ನಂಜನಗೂಡು ತಾಲ್ಲೂಕು ಇಮ್ಮಾವು ಗ್ರಾಮಕ್ಕೆ ಗ್ರಾಮಕ್ಕೆ ಸೇರಿದಂತ ಸುಮಾರು ಸಾವಿರ ಎಕರೆ ಜಮೀನನ್ನು ಕೆಐಎಡಿಬಿ 2008ರಲ್ಲಿ ಚಿತ್ರನಗರಿ ನಿರ್ಮಾಣಕ್ಕೆ ಭೂಸ್ವಾಧೀನ ಪಡಿಸಿಕೊಂಡಿರುತ್ತಾರೆ. ಇದರಲ್ಲಿ ಸುಮಾರು 500 ಎಕರೆ ಸರ್ಕಾರಿ ಗೋಮಾಳವಾಗಿರುತ್ತದೆ.

ಸುಮಾರು 480ಕ್ಕೂ ಹೆಚ್ಚು ರೈತರು ಬಗರ್ ಹುಕುಂ ಸಾಗುವಳಿ ಮಾಡುತ್ತಿದ್ದೇವೆ ಎಂದು  ಅರ್ಜಿ ಸಲ್ಲಿಸಿರುತ್ತಾರೆ. ಆದರೆ ಸರ್ಕಾರ ಈ ಬಗ್ಗೆ ರೈತರಿಗೆ ಅನುಮೋದನೆ ನೀಡಿಲ್ಲ. ಆದರೆ, ಸರ್ಕಾರ ಯಾವ ರೈತರಿಗೆ ಪಹಣಿ ಇರುತ್ತದೆ ಅಂತವರಿಗೆ 21 ಲಕ್ಷ ಪರಿಹಾರ ನೀಡುವಂತೆ ಆದೇಶ ಮಾಡಿರುತ್ತದೆ. ಸಾಗುವಳಿ ಮಾಡುತ್ತಿದ್ದ ರೈತರಿಗೆ ಪರಿಹಾರ ಕೊಡದ ಹಿನ್ನೆಲೆಯಲ್ಲಿ ರೈತರು ಹೋರಾಟ ಮಾಡುತ್ತಾರೆ.

ಬಳಿಕ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಅವರ ಟಿಪ್ಪಣಿ ಆಧಾರದ ಮೇಲೆ 480 ಅರ್ಜಿದಾರರಿಗೆ ಪರಿಹಾರ ಕೊಡುವಂತೆ ಸೂಚನೆ ಸಿಗುತ್ತದೆ. 18 ಕೋಟಿ ರೂ. ಬಿಡುಗಡೆಗೊಂಡು ಮಾನವೀಯತೆ ಆಧಾರದ ಮೇಲೆ 4 ಲಕ್ಷ ರೂ.ಗಳ ಪರಿಹಾರಕ್ಕಾಗಿ ಆದೇಶ ವಾಗುತ್ತದೆ.

ಕೆಲವು ರಾಜಕೀಯ ಮುಖಂಡರು ಬೆಂಗಳೂರಿನಲ್ಲಿ ಕುಳಿತು ಮೂಲ ರೈತರನ್ನು ಕೈ ಬಿಟ್ಟು ಅವರು ಸೂಚಿಸಿದ ಈ ಭಾಗದ ರೈತರನ್ನು ಕೈ ಬಿಟ್ಟು ಚಾಮರಾಜನಗರ, ಮೈಸೂರು,ಗುಂಡ್ಲುಪೇಟೆ ಸೇರಿದಂತೆ ಬೇರೆ ಬೇರೆ ಭಾಗದ ಜನರಿಗೆ ಪರಿಹಾರ ಹೋಗಿರುತ್ತದೆ.

ಈ ವಿಷಯ ಗಮನಕ್ಕೆ ಬಂದ ಈ ಭಾಗದ ರೈತರು ಪರಿಹಾರ ಸಂಬಂಧ ದಾಖಲೆಗಳನ್ನು ಪರಿಶೀಲಿಸಿದಾಗ ವಿಷಯ ತಿಳಿದು ಕಳೆದ 146 ದಿನಗಳಿಂದ ಪ್ರತಿಭಟನೆ ನಡೆಸಲಾಗುತ್ತಿದ್ದು, ಇಂದು ನಮಗೆ ಪರಿಹಾರ ಬೇಡ ನಮಗೆ ನಮ್ಮ ಭೂಮಿಯನ್ನು ಬಿಟ್ಟುಕೊಡಿ ಎಂದು ಉಳುಮೆ ಮಾಡುವ ಮೂಲಕ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದೇವೆ ಎಂದರು.

ಪ್ರತಿಭಟನೆಯಲ್ಲಿ ರಾಜ್ಯ ಉಪಾಧ್ಯಕ್ಷ ಕೆಂಪು ಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮರಂಕಯ್ಯ, ಶ್ರೀಕಂಠ, ಬಸಪ್ಪ, ಪ್ರಕಾಶ್, ಪ್ರೇಮ್ ರಾಜ್, ಚಂದ್ರಶೇಖರ್, ಚಂದ್ರೇಗೌಡ, ಕುಮಾರ್, ಮಹೇಶ್, ಶಿವಣ್ಣ ನಾಯಕ ರಾಜಮ್ಮ, ಪುಟ್ಟಮ್ಮ, ಸಾಕಮ್ಮ ಸೇರಿದಂತೆ ಸುತ್ತಮುತ್ತಲಿನ ನೂರಾರು ರೈತರು ಭಾಗವಹಿಸಿದ್ದರು.