ನಂಜನಗೂಡು: ಕಬಿನಿ ಮತ್ತು ನುಗು ಬಲದಂಡೆ ನಾಲೆಯಲ್ಲಿ ಅಕ್ರಮವಾಗಿ ಮಣ್ಣು ಸಾಗಾಟ ಮಾಡುತ್ತಿದ್ದರು ಕೂಡ ಸಂಬಂಧ ಪಟ್ಟ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ರೈತರು ಪ್ರತಿಭಟನೆ ನಡೆಸಿದರು.
ನಂಜನಗೂಡು ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗ ಗುರುವಾರ ಜಮಾಯಿಸಿದ ರೈತರು ತಾಲ್ಲೂಕು ಆಡಳಿತ ಹಾಗೂ, ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ವಿರುದ್ಧ ಧಿಕ್ಕಾರಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದರು.
ಬಳಿಕ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಸತೀಶ್ ರಾವ್ ಮಾತನಾಡಿ, ತಾಲ್ಲೂಕಿನಲ್ಲಿ ಅಕ್ರಮವಾಗಿ ಮಣ್ಣು ಸಾಗಾಣಿಕೆ ಮಾಡುತ್ತಿದ್ದಾರೆ. ನಾಲಾ ಏರಿಗಳನ್ನು ಅಗೆಯುವುದರಿಂದ ನಾಲೆಗಳು ಒಡೆದು ಹೋಗುತ್ತವೆ. ಹೀಗಿದ್ದರೂ ಸಹ ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ತಾಲ್ಲೂಕಿನ ಕಬಿನಿ ಬಲದಂಡೆ, ನುಗು ಬಲದಂಡೆಗಳ ವ್ಯಾಪ್ತಿಯ ಅಳಗಂಚಿಪುರ, ಅಳಗಂಚಿ, ಹರತಲೆ, ಶಿರಮಳ್ಳಿ, ಹೆಗ್ಗಡಹಳ್ಳಿ, ಮೊಬ್ಬಳ್ಳಿ, ಕಾಳಿಹುಂಡಿ, ಸಿಂಧುವಳ್ಳಿ ಸಮೀಪದಲ್ಲಿರುವ ನಾಲಾ ಏರಿಗಳಲ್ಲಿ ಜೆಸಿಬಿ, ಟಿಪ್ಪರ್, ಟ್ರ್ಯಾಕ್ಟರ್ ಗಳ ಮೂಲಕ ಪ್ರತಿನಿತ್ಯ ಅಕ್ರಮವಾಗಿ ಮಣ್ಣು ಸಾಗಾಟ ಮಾಡುತ್ತಿದ್ದರೂ ಕೂಡ ಸಂಬಂಧಪಟ್ಟ ಇಲಾಖೆಗಳು ಕಣ್ಣು ಮುಚ್ಚಿ ಕುಳಿತಿವೆ.
ಅಕ್ರಮವಾಗಿ ಮಣ್ಣು ಸಾಗಾಟ ಮಾಡುವುದರಿಂದ ಓಡಾಡುವ ರಸ್ತೆಗಳು ಸೇರಿದಂತೆ ಏರಿಗಳು ಒಡೆದು ಹೋಗುವ ಆತಂಕ ಎದುರಾಗಿದೆ. ಇತ್ತೀಚಿಗೆ ಸಿಂಧುವಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಮಣ್ಣು ಸಾಗಾಟ ನಡೆಸುತ್ತಿದ್ದ ಸಂದರ್ಭದಲ್ಲಿ ತಡೆಯಲು ಹೋದ ಸಂದರ್ಭದಲ್ಲಿ ರೈತರ ಮೇಲೆ ಟಿಪ್ಪರ್ ಡ್ರೈವರ್ ಗಳು ಹಲ್ಲೆಗೆ ಯತ್ನಿಸಿದರು. ರೈತರು ಅಕ್ರಮ ಮಣ್ಣು ಮಾರಾಟ ಮಾಡುತ್ತಿದ್ದ ಸಂದರ್ಭದಲ್ಲಿ ದಾಳಿ ನಡೆಸಿ ಸ್ಥಳದಲ್ಲಿದ್ದ ವಾಹನಗಳನ್ನು ಅಧಿಕಾರಿಗಳ ಸಮ್ಮುಖದಲ್ಲಿ ಪೊಲೀಸರಿಗೆ ಒಪ್ಪಿಸಲಾಗಿತ್ತು.
ಆದರೂ ಕೂಡ ಇದುವರೆಗೂ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ದೂರು ದಾಖಲು ಮಾಡಲು ವಿಫಲರಾಗಿದ್ದಾರೆ. ಕೂಡಲೇ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿ, ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಸಿಂಧವಳ್ಳಿ ಮಹದೇವ ನಾಯಕ, ಶ್ವೇತಾ, ರಂಗಸ್ವಾಮಿ ನಾಯಕ, ಗೋವಿಂದ, ಕತ್ತವಾಡಿಪುರ ಶಿವಣ್ಣ, ಶಂಕರನಾಯಕ, ಮಾದೇಗೌಡ, ಮಹದೇವ ನಾಯಕ ಸೇರಿದಂತೆ ಮತ್ತಿತರರು ಹಾಜರಿದ್ದರು.

