ನಂಜನಗೂಡು: ನಗರದ ಕಪಿಲ ನದಿ ಮೈದುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರೈತರು ಸೋಮವಾರ ಬಾಗಿನ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿದರು.

ನಂಜನಗೂಡಿನ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದ ಬಳಿ ನಡೆದ ಕಾರ್ಯಕ್ರಮದಲ್ಲಿ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ವಿದ್ಯಾಸಾಗರ್ ನೇತೃತ್ವದಲ್ಲಿ ರೈತರು ಕಪಿಲಾ ನದಿಗೆ ಪೂಜೆ ಸಲ್ಲಿಸಿದರು. ನಾಡಿಗೆ ಉತ್ತಮ ಮಳೆ, ಬೆಳೆ ಆಗಲಿ ಎಂದು ಪ್ರಾರ್ಥಿಸಿ ನದಿಗೆ ಬಾಗಿನ ಅರ್ಪಿಸಿದರು.

ಬಳಿಕ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾಧ್ಯಕ್ಷ ಸತೀಶ್ ರಾವ್ ಮಾತನಾಡಿ, ಬರಗಾಲದ ನಡುವೆಯೂ ಕಪಿಲ ನದಿ ತುಂಬಿ ಹರಿಯುತ್ತಿದೆ. ನಾಲೆಗಳಿಗೆ ನೀರು ಬಿಡುವ ಕೆಲಸವನ್ನು ಸರ್ಕಾರ ಕೂಡಲೇ ಮಾಡಬೇಕಿತ್ತು. ಆದರೆ ತಮಿಳುನಾಡಿಗೆ ಸಾವಿರಾರು ಕ್ಯೂಸೆಕ್ ನೀರು ಹರಿಯುತ್ತಿದೆ ಎಂದು ಆರೋಪಿಸಿದರು.

ತುಂಬಿ ಹರಿಯುತ್ತಿರುವ ಕಪಿಲೆಗೆ ಗೌರವ ಸಲ್ಲಿಸುವುದು ಎಲ್ಲರ ಕರ್ತವ್ಯ. ಹಾಗಾಗಿ ಕಪಿಲಾ ನದಿಗೆ ಬಾಗಿನ ಅರ್ಪಿಸುವ ಮೂಲಕ ಗೌರವ ಸಮರ್ಪಣೆ ಮಾಡಿದ್ದೇವೆ. ಕಪಿಲ ಮಾತೆ ನಮ್ಮ ರಕ್ತದ ಕಣಕಣದಲ್ಲೂ ಇದ್ದಾಳೆ. ಆ ತಾಯಿ ನಮ್ಮ ನಾಡಿಗೆ ಮಳೆ ಬೆಳೆ ಸಮೃದ್ಧಿ ತರಲಿ. ರೈತ ಬಂಧುಗಳು ಆಘಾತದಲ್ಲಿದ್ದಾರೆ, ದಿನನಿತ್ಯ ಸಂಕಷ್ಟಗಳು ಹೆಚ್ಚಾಗುತ್ತಿವೆ. ಕಪಿಲಾ ಮಾತೆ ನಮ್ಮನ್ನು ರಕ್ಷಣೆ ಮಾಡಬೇಕು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ದೇವರಾಜು, ಬಿಳಿಗೆರೆ ಹೋಬಳಿ ಅಧ್ಯಕ್ಷ ಸಿದ್ದು, ಮೈಸೂರು ಹಸಿರು ಸೇನೆಯ ಜಿಲ್ಲಾಧ್ಯಕ್ಷ ದೊಡ್ಡಯ್ಯ, ಜಿಲ್ಲಾ ಉಪಾಧ್ಯಕ್ಷ ಶಂಕರನಾಯಕ, ತಾಲ್ಲೂಕು ಉಪಾಧ್ಯಕ್ಷ ಮಹದೇವ ನಾಯಕ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶ್ವೇತಾ, ತಾಲ್ಲೂಕು ಅಧ್ಯಕ್ಷೆ ರತ್ನಮ್ಮ, ನಾಗಯ್ಯ, ಮಂಜು, ನಟರಾಜು, ಮಂಜುನಾಥ್, ವರದರಾಜ್, ಕುಮಾರ್, ರಮೇಶ್ ಸೇರಿದಂತೆ ರೈತ ಸಂಘದ ಪದಾಧಿಕಾರಿಗಳು ಹಾಜರಿದ್ದರು.